ಕುತ್ತಿಗೆಗೆ ವಿಷಕಾರಿ ನಾಗರಹಾವನ್ನು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವ್ಯಕ್ತಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ದೀಪಕ್ ಮಹಾವರ್ ಎಂದು ಗುರುತಿಸಲಾಗಿದೆ. ಇವರು ಜೆಪಿ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿದ್ದರು.
ಘಟನೆ ನಡೆಯುವ ಮೊದಲು ದೀಪಕ್, ತನ್ನ ಕುತ್ತಿಗೆಗೆ ನಾಗರಹಾವನ್ನು ಸುತ್ತಿಕೊಂಡು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವಿಡಿಯೋವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೀಪಕ್, ಹಾವುಗಳನ್ನು ರಕ್ಷಿಸುವಲ್ಲಿ ಪರಿಣತಿ ಹೊಂದಿದ್ದರು ಮತ್ತು ಸಾವಿರಾರು ಹಾವುಗಳನ್ನು ಉಳಿಸಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಅವರು ನಾಗರಹಾವನ್ನು ಹಿಡಿದು ಗಾಜಿನ ಪಾತ್ರೆಯಲ್ಲಿ ಇಟ್ಟಿದ್ದರು. ಮುಂಬರುವ ಶ್ರಾವಣ ಮಾಸದ ಮೆರವಣಿಗೆಯಲ್ಲಿ ಅದನ್ನು ಪ್ರದರ್ಶಿಸುವ ಉದ್ದೇಶ ಅವರಿಗಿತ್ತು.
ಘಟನೆ ನಡೆದ ದಿನ, ದೀಪಕ್ ತನ್ನ ಮಕ್ಕಳನ್ನು ಶಾಲೆಗೆ ಬಿಡಲು ಹೋಗುವಾಗ ನಾಗರಹಾವನ್ನು ಹಾರದಂತೆ ಕುತ್ತಿಗೆಗೆ ಸುತ್ತಿಕೊಂಡಿದ್ದರು ಎನ್ನಲಾಗಿದೆ. ನಂತರ, ಹಾವು ಇದ್ದಕ್ಕಿದ್ದಂತೆ ಕಚ್ಚಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರಿಗೆ ಆಂಟಿವೆನಮ್ ನೀಡಲಾಗಿದ್ದರೂ, ವೈದ್ಯಕೀಯ ನೆರವು ಪಡೆಯುವಲ್ಲಿ ಆದ ವಿಳಂಬದಿಂದಾಗಿ ಚಿಕಿತ್ಸೆ ಪರಿಣಾಮಕಾರಿಯಾಗಿಲ್ಲ.
ದೀಪಕ್ ಅವರಿಗೆ 12 ವರ್ಷದ ರೌನಕ್ ಮತ್ತು 14 ವರ್ಷದ ಚಿರಾಗ್ ಎಂಬ ಇಬ್ಬರು ಪುತ್ರರಿದ್ದಾರೆ. ಇವರ ಪತ್ನಿ ಈ ಹಿಂದೆ ನಿಧನರಾಗಿದ್ದರಿಂದ ಮಕ್ಕಳಿಬ್ಬರು ಈಗ ಅನಾಥರಾಗಿದ್ದಾರೆ.