ಚಿತ್ರದುರ್ಗ: ಹೊಳಲ್ಕೆರೆ ಠಾಣೆ ಎದುರು ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆ ಎದುರು ಅಜ್ಜಯ್ಯ(45) ಅವರ ಶವ ಇಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪೊಲೀಸ್ ಠಾಣೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಲಾಗಿದೆ. ಸಿಪಿಐ ಚಿಕ್ಕಣ್ಣನವರ, ಪಿಎಸ್ಐ ಸಚಿನ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಪೊಲೀಸರ ನಿರ್ಲಕ್ಷ್ಯದಿಂದಾಗಿ ಅಜ್ಜಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿಚಾರ್ಜ್ ಮಾಡುವ ಮೂಲಕ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದ್ದಾರೆ.
ಠಾಣೆಯ ಮುಂದೆ ಇಟ್ಟಿದ್ದ ಅಜ್ಜಯ್ಯನ ಶವವನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ. ಪೊಲೀಸರ ಲಾಠಿ ಏಟು ತಿಂದ ಇಬ್ಬರು ಪ್ರತಿಭಟನಕಾರರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮಾಜಿ ಸಚಿವ ಹೆಚ್. ಆಂಜನೇಯ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿಯಾಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಆತ್ಮಹತ್ಯೆಗೆ ಶರಣಾದ ಅಜ್ಜಯ್ಯನ ಕುಟುಂಬದವರಿಗೆ ಆಂಜನೇಯ ಸಾಂತ್ವನ ಹೇಳಿದ್ದಾರೆ.
ಮಗಳು ಮನೆ ಬಿಟ್ಟು ಹೋಗಿದ್ದು, ಯುವಕನ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಬಂದಿದ್ದ ಅಜ್ಜಯ್ಯ ಅವರಿಗೆ ಪೊಲೀಸರು ಸ್ಪಂದಿಸಿರಲಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ತು ಹೊಳಲ್ಕೆರೆ ಠಾಣೆ ಎದುರು ಅಜ್ಜಯ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಠಾಣೆಯ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಹೇಳಲಾಗಿದೆ.