ಕೋಲ್ಕತ್ತ: ಹಣದ ವಿಚಾರವಾಗಿ ನಡೆದ ಜಗಳದಲ್ಲಿ ಸಾಲ ನೀಡಿದ ವ್ಯಕ್ತಿಯೊಬ್ಬ ಸಾಲ ಪಡೆದ ವ್ಯಕ್ತಿಯ ಕಿವಿಯನ್ನೇ ಕಚ್ಚಿ ತುಂಡರಿಸಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಹಿಂಗಲ್ ಗಂಜ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮಾರುಕಟ್ಟೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಗೋವಿಂದ ಮಂಡಲ್, ಹಿಮಾದ್ರಿ ಬರ್ಮನ್ ಅವರಿಗೆ ಹಣ ಬಾಕಿ ಇದೆ ಎಂದಿದ್ದಕ್ಕಾಗಿ ಜಗಳ ಶುರುವಾಗಿತ್ತು. ಹಿಮಾದ್ರಿ ಬರ್ಮನ್ ಹಣವನ್ನು ಸಾಲವಾಗಿ ಪಡೆದಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಆರಂಭವಾಗಿ ಹೊಡೆದಾಡಿಕೊಂಡಿದ್ದಾರೆ.
ಗಲಾಟೆ ವಿಪರೀತಕ್ಕೆ ಹೋಗಿದ್ದು, ಗೋವಿಂದ ಮಂಡಲ್, ಹಿಮಾದ್ರಿ ಬರ್ಮನ್ ನನ್ನು ಹಿಡಿದು ಆತನ ಕಿವಿಯನ್ನು ಕಚ್ಚಿ ತುಂಡರಿಸಿಬಿಟ್ಟಿದ್ದಾನೆ. ಸ್ಥಳೀಯರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ನಿಭಾಯಿಸುವಷ್ಟರಲ್ಲಿ ಬರ್ಮನ್ ಕುಸಿದುಬಿದ್ದಿದ್ದಾರೆ. ಸದ್ಯ ಪೊಲೀಸರು ಮಂಡಲ್ ನನ್ನು ವಶಕ್ಕೆ ಪಡೆದಿದ್ದಾರೆ.
ಹಲ್ಲೆಗೊಳಗಾದ ಬರ್ಮನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.