ರಾಯಚೂರು: ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣ ಮಾಡುವಾಗ ವ್ಯಕ್ತಿಯೊಬ್ಬ ಮಚ್ಚು ಹಿಡಿದು ವೇದಿಕೆಗೆ ನುಗ್ಗಿದ ಘಟನೆ ನಡೆದಿದೆ.
ಶ್ರೀರಾಮ ಸೇನೆ ಭಾನುವಾರ ಸಂಜೆ ಆಯೋಜಿಸಿದ್ದ ಶ್ರೀ ರಾಮನವಮಿ ಮತ್ತು ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯತ್ನಾಳ್ ಭಾಷಣ ಮಾಡುವಾಗ ಬೆನ್ನ ಹಿಂದೆ ಮಚ್ಚು ಇಟ್ಟುಕೊಂಡು ವ್ಯಕ್ತಿಯೊಬ್ಬ ವೇದಿಕೆ ಮೇಲೆ ಹತ್ತಿದ್ದಾನೆ.
ಲಿಂಗಸುಗೂರು ತಾಲೂಕಿನ ವಂದಲಿ ಗ್ರಾಮದ ಶ್ರೀನಿವಾಸ ಪೂಜಾರಿ(45) ಮಚ್ಚು ಇಟ್ಟುಕೊಂಡು ವೇದಿಕೆ ಮೇಲೆ ಬಂದಿರುವುದನ್ನು ಗಮನಿಸಿದ ಕಾರ್ಯಕ್ರಮದ ಆಯೋಜಕರು ಮತ್ತು ಪೊಲೀಸರು ಆತನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಶ್ರೀನಿವಾಸ ಹಟ್ಟಿ ಚಿನ್ನದ ಗಣಿ ನೌಕರನಾಗಿದ್ದಾನೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಮಚ್ಚು ಹಿಡಿದುಕೊಂಡು ಓಡಾಡುತ್ತಿರುವುದಾಗಿ ತಿಳಿಸಿದ್ದಾನೆ. ಈತ ಮದ್ಯ ಸೇವಿಸಿ ವೇದಿಕೆಗೆ ನುಗ್ಗಿದ್ದ ಎನ್ನಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.