ಬೆಂಗಳೂರು: ಅಂಚೆ ಇಲಾಖೆಯಲ್ಲಿ ಹೊಸ ಸಾಫ್ಟ್ ವೇರ್ ಅಳವಡಿಕೆಯಿಂದ ರಾಜ್ಯದ ಹಲವೆಡೆ ಅಂಚೆ ಕಚೇರಿ ಸೇವೆಗಳಲ್ಲಿ ಭಾರಿ ಸಮಸ್ಯೆ ಉಂಟಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ.
ರಾಜ್ಯದ ವಿವಿಧೆಡೆ ಅಂಚೆ ಕಚೇರಿಗಳಲ್ಲಿ ಅಂಚೆ ಸೇವೆಗಳ ಬುಕಿಂಗ್ ನಲ್ಲಿ ವ್ಯತ್ಯಯವಾಗುತ್ತಿದೆ. ಪಾರ್ಸೆಲ್, ಪೋಸ್ಟ್, ಲಾಜಿಸ್ಟಿಕ್ಸ್ ಸೇರಿದಂತೆ ಅನೇಕ ಸೇವೆಗಳ ಬುಕಿಂಗ್ ಮಾಡಲಾಗದೆ ಗ್ರಾಹಕರು ಪರದಾಡುವಂತಾಗಿದೆ. ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆ ಪಾರ್ಸೆಲ್ ಸೇರಿ ಹಲವು ಪೋಸ್ಟ್ ಮೊದಲಿನಂತೆ ಬುಕಿಂಗ್ ಆಗುತ್ತಿಲ್ಲ. ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಕೆಲಸ ಕಾರ್ಯಗಳನ್ನು ಬಿಟ್ಟು ಅಂಚೆ ಕಚೇರಿಯಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ಗ್ರಾಹಕರಿಂದ ಅಸಮಾಧಾನ ವ್ಯಕ್ತವಾಗಿದೆ.
ಅಂಚೆ ಇಲಾಖೆ ಅನೇಕ ವರ್ಷಗಳಿಂದ ಇದ್ದ ಸಾಫ್ಟ್ವೇರ್ ಬದಲಿಗೆ ಜುಲೈ ತಿಂಗಳಲ್ಲಿ ಐಟಿ 2.0 ಹೆಸರಿನ ಹೊಸ ಸಾಫ್ಟ್ವೇರ್ ಅಳವಡಿಸಿಕೊಂಡಿದೆ. ಸಿಐಪಿಟಿ ಅಭಿವೃದ್ಧಿಪಡಿಸಿದ ಹೊಸ ಸಾಫ್ಟ್ವೇರ್ ನಲ್ಲಿ ಕೆಲಸಗಳನ್ನು ಸುಲಭಗೊಳಿಸಿದೆ. ಹೆಚ್ಚು ಕ್ಷಮತೆ ಹೊಂದಿರುವ ಹೊಸ ಸಾಫ್ಟ್ ವೇರ್ ನಿಂದ ಅನುಕೂಲವಾಗಿದೆ. ಹೊಸ ಸಾಫ್ಟ್ವೇರ್ ಕರ್ನಾಟಕಕ್ಕೆ ಸೀಮಿತವಾಗಿ ಪರಿಚಯಿಸಿದಾಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಅಂಚೆ ಸಿಬ್ಬಂದಿಯಿಂದ ಉತ್ತಮ ಪ್ರತಿಕ್ರಿಯೆ ಬಂದ ಕಾರಣ ದೇಶಾದ್ಯಂತ ವಿಸ್ತರಿಸಿದ್ದು, ಸಾಫ್ಟ್ವೇರ್ ಕ್ಷಮತೆ ಮೇಲೆ ಪರಿಣಾಮ ಉಂಟಾಗಿ ಕೆಲಸ ನಿಧಾನವಾಗುತ್ತಿದೆ. ಸಾಮರ್ಥ್ಯವನ್ನು ಹೆಚ್ಚಳ ಮಾಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದ್ದು, ವಾರದಲ್ಲಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.