ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಬೀಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಂಕಜಾ ಮುಂಡೆಯವರಿಗೆ ಸೋಲುಂಟಾದರೆ ನಾನು ಬದುಕುವುದಿಲ್ಲ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ ಬಸ್ಸಿಗೆ ಸಿಲುಕಿ ಸಾವಿಗೀಡಾಗಿದ್ದಾನೆ. ಇದು ಆತ್ಮಹತ್ಯೆ ಪ್ರಕರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣದ ವಿವರ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬೀಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಂಕಜಾ ಮುಂಡೆಯವರ ಅಭಿಮಾನಿ ಎಂದು ಹೇಳಲಾದ 38 ವರ್ಷದ ಸಚಿನ್ ಮುಂಡೆ ವಿಡಿಯೋ ಒಂದನ್ನು ಮಾಡಿ, ಒಂದೊಮ್ಮೆ ಪಂಕಜಾ ಅವರು ಈ ಚುನಾವಣೆಯಲ್ಲಿ ಸೋತರೆ ನಾನು ಬದುಕುವುದಿಲ್ಲ ಎಂದು ಹೇಳಿಕೆ ನೀಡಿದ್ದ. ಆ ಸಂದರ್ಭದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿತ್ತು.
ಲೋಕಸಭಾ ಚುನಾವಣೆ ಮತ ಎಣಿಕೆ ವೇಳೆ ಪಂಕಜಾ ಮುಂಡೆಯವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಭಜರಂಗ್ ಸೋನವಾನೆ ವಿರುದ್ಧ ಅತ್ಯಂತ ಕಡಿಮೆ ಅಂದರೆ ಕೇವಲ 6,553 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. ಆ ಬಳಿಕ ಸಚಿನ್ ತೀವ್ರ ಖಿನ್ನತೆಗೀಡಾಗಿದ್ದ ಎನ್ನಲಾಗಿದೆ.
ಲಾತೂರಿನ ಅಹಮದ್ ಪುರ ನಿವಾಸಿಯಾದ ಸಚಿನ್ ಶುಕ್ರವಾರದಂದು ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಿಂಬದಿ ನಿಂತಿದ್ದ ವೇಳೆ ರಿವರ್ಸ್ ಬಂದ ಬಸ್ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಆತ ಸಾವಿಗೀಡಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದು ಆತ್ಮಹತ್ಯೆ ಪ್ರಕರಣವಿರಬಹುದು ಎಂದು ಶಂಕಿಸಿದ್ದು, ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
