ಭೋಪಾಲ್: ಎಲ್ಲರಿಗೂ ಎರಡು ಲಾಡು ಕೊಡಲಾಗಿದೆ. ನನಗೆ ಮಾತ್ರ ಒಂದು ಲಾಡು ಕೊಟ್ಟಿರುವುವು ಯಾಕೆ ಎಂದು ಪ್ರಶ್ನಿಸಿ ವ್ಯಕ್ತಿಯೊಬ್ಬ ಮುಖ್ಯಮಂತ್ರಿಗಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ಗ್ರಾಮ ಪಂಚಾಯತ್ ಭವನದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆದಿತ್ತು. ಧ್ವಜಾರೋಹಣದ ಬಳಿಕ ಸ್ಥಳದಲ್ಲಿ ಹಾಜರಿದ್ದ ಎಲ್ಲರಿಗೂ ಎರಡು ಲಡ್ಡು ವಿತರಿಸಲಾಗಿತ್ತು. ಗ್ರಾಮಸ್ಥ ಕಮಲೇಶ್ ಕುಶ್ವಾಹ ಸರದಿ ಬಂದಾಗ ಅವರಿಗೆ ಕೇವಲ ಒಂದು ಲಡ್ಡು ಕೊಡಲಾಗಿದೆ. ಇದರಿಂದ ಅಸಮಾಧಾನಗೊಂಡ ಕಮಲೇಶ್ ಎಲ್ಲರಿಗೂ ಎರಡು ಲಡ್ಡು ಹಂಚಲಾಗಿದೆ. ನನಗೆ ಯಾಕೆ ಒಂದೇ ಲಡ್ಡು? ಎಂದು ಕೇಳಿದ್ದರು. ಆದರೆ ಅಲ್ಲಿದ್ದವರು ಎರಡು ಲಡ್ಡು ನೀಡಲು ನಿರಾಕರಿಸಿದ್ದಾರೆ.
ಇದರಿಂದ ಬೇಸರಗೊಂಡಿದ್ದ ಕಮಲೇಶ್ ಕುಶ್ವಾನ್, ಪಂಚಾಯತ್ ಕಟ್ಟಡದ ಹೊರಗಿನಿಂದಲೇ ಸಿಎಂ ಸಹಾಯವಾಣಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಧ್ವಜಾರೋಹಣದ ಬಳಿಕ ಪಂಚಾಯತ್ ಸರಿಯಾಗಿ ಸಿಹಿತಿಂಡಿ ವಿತರಿಸುವಲ್ಲಿ ವಿಫಲವಾಗಿದೆ. ಈ ವಿಷಯವನ್ನು ಸೂಕ್ತವಾಗಿ ಬಗೆಹರಿಸಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಮಲೇಶ್ ದೂರು ನೀಡುತ್ತಿದ್ದಂತೆ ಪಂಚಾಯತ್ ಆತನಿಗೆ ಮಾರುಕಟ್ಟೆಯಿಂದ ಒಂದು ಕೆಜಿ ಲಡ್ದು ತರಿಸಿ ನೀಡಿ ಸಮಾಧಾನ ಪಡಿಸಿದೆ. 2020ರಲ್ಲಿ ಗ್ರಾಮಸ್ಥರೊಬ್ಬರು ಸಿಎಂ ಸಹಾಯವಾಣಿಗೆ ಕರೆ ಮಾಡಿ ದೋಷಪೂರಿತ ಹ್ಯಾಂಡ್ ಪಂಪ್ ವಿತರಿಸಿದ್ದನ್ನು ಪ್ರಶ್ನಿಸಿ ದೂರು ನೀಡಿದ್ದರು.