ಜೆಡಿಎಸ್ ಪಕ್ಷದ ಶಾಸಕರು ಮತ್ತು ಕೊರ್ ಕಮಿಟಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕೊರ್ ಕಮಿಟಿಯನ್ನು ಪಕ್ಷದ ಸಂಘಟನೆ ಮತ್ತು ಬಲವರ್ಧನೆ ದೃಷ್ಟಿಯಿಂದ ಪುನರ್ ರಚಿಸಲಾಗಿದೆ.
ಅಧ್ಯಕ್ಷರಾಗಿ ಎಂ. ಕೃಷ್ಣಾ ರೆಡ್ಡಿ, ಸಂಚಾಲಕರಾಗಿ ಎ. ಮಂಜು ಅವರನ್ನು ನೇಮಕ ಮಾಡಲಾಗಿದೆ. ಉಳಿದಂತೆ ಸದಸ್ಯರಾಗಿ ರಾಜಾ ವೆಂಕಟನ್ವ ನಾಯಕ ದೊರೆ, ಹೆಚ್.ಡಿ. ರೇವಣ್ಣ, ಎಂ. ಮಲ್ಲೇಶ್ ಬಾಬು, ಡಿ.ಸಿ. ತಮ್ಮಣ್ಣ, ಹನುಮಂತಪ್ಪ ಆಲ್ಕೊಡು, ಹೆಚ್.ಕೆ. ಕುಮಾರಸ್ವಾಮಿ, ಸಿ.ಎಸ್. ಪುಟ್ಟರಾಜು, ಹೆಚ್.ಎಸ್. ಶಿವಶಂಕರ್, ಕೆ.ಎಂ. ತಿಮ್ಮರಾಯಪ್ಪ, ಎ. ಮಂಜುನಾಥ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕೆ.ಬಿ. ಪ್ರಸನ್ನ ಕುಮಾರ್, ಕರೆಮ್ಮ ಜಿ ನಾಯಕ, ನೇಮಿರಾಜ ನಾಯಕ, ಸಮೃದ್ಧಿ ಮಂಜುನಾಥ್, ಶರಣಗೌಡ ಕಂದಕೂರ, ಗೋವಿಂದರಾಜು, ಚಂದ್ರಶೇಖರ್ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ಪಕ್ಷದ ಚಟುವಟಿಕೆ ಮತ್ತು ಪಕ್ಷದ ಬಲವರ್ಧನೆ ಸಂಘಟನೆ ಕೈಗೊಳ್ಳಲು ಚುರುಕುಗೊಳಿಸುವುದು, ವಿಧಾನ ಪರಿಷತ್ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ತಯಾರಿಸಿ ಸಲ್ಲಿಸುವುದು, ಎನ್.ಡಿ.ಎ. ಮೈತ್ರಿಕೂಟದಿಂದ ಸಮನ್ವಯ ಚುನಾವಣಾ ಹೊಂದಾಣಿಕೆ ಸಿದ್ಧಪಡಿಸುವುದು ಸೇರಿ ಹಲವು ಕಾರ್ಯಗಳನ್ನು ಕೋರ್ ಕಮಿಟಿ ಕೈಗೊಳ್ಳಲಿದೆ.
ಕೋರ್ ಕಮಿಟಿಯಿಂದ ಜಿ.ಟಿ. ದೇವೇಗೌಡರನ್ನು ಕೈ ಬಿಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯ ಸರಿ ಮಾಡಿಕೊಂಡು ಜೆಡಿಎಸ್ ಕಟ್ಟಲು ಮುಂದಾಗಿದ್ದಾರೆ. ಸಿಎಂ ಆಗುವ ಕನಸಿನೊಂದಿಗೆ ಪಕ್ಷ ಕಟ್ಟಲು ಹೊರಟಿದ್ದು, ಅವರಿಗೆ ಶುಭವಾಗಲಿ ಎಂದಿದ್ದಾರೆ.
ವಿರೋಧ ಪಕ್ಷದ ನಾಯಕನನ್ನಾಗಿ ನನ್ನನ್ನು ಮಾಡದೇ ಇದ್ದಾಗ ಬೇಸರವಾಯಿತು. ಮನಸ್ಸಿಗೆ ನೋವಾಗಿ ಪಕ್ಷದ ಸಭೆಗಳಲ್ಲಿ ಭಾಗವಹಿಸಿಲ್ಲ. ಕೋರ್ ಕಮಿಟಿ ಅಧ್ಯಕ್ಷನನ್ನಾಗಿ ಮಾಡಿದಾಗ ಇಡೀ ರಾಜ್ಯ ಸುತ್ತಿ ಸಭೆ ನಡೆಸಿದ್ದೇನೆ. ಅಧ್ಯಕ್ಷ ಸ್ಥಾನದಿಂದ ನನ್ನನ್ನು ಕೈಬಿಟ್ಟಿದ್ದಕ್ಕೆ ಯಾವುದೇ ಬೇಸರವಿಲ್ಲ ಎಂದು ತಿಳಿಸಿದ್ದಾರೆ.


