ಬಾಗಲಕೋಟೆ: ರಾಜಕೀಯದಲ್ಲಿ ಅಧಿಕಾರಕ್ಕೆ ಹಂಬಲಿಸುವುದು ಸಾಮಾನ್ಯ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ
ಬಾಗಲಕೋಟೆಯಲ್ಲಿ ಮಾತನಾಡಿದ ವೀರಪ್ಪ ಮೊಯ್ಲಿ, ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ರಾಜಕೀಯದಲ್ಲಿ ಅಧಿಕಾರಕ್ಕೆ ಹಂಬಲಿಸುವುದು ಸಾಮಾನ್ಯ. ಸಾಯುವವರೆಗೂ ಕೆಲವರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸಿಗುವುದಿಲ್ಲ. ಆದ್ದರಿಂದ ಅದೇನು ವಿಶೇಷ ಬೆಳವಣಿಗೆ ಏನಲ್ಲ. ಅಧಿಕಾರಕ್ಕಾಗಿ ಪೈಪೋಟಿ ಇದ್ದೇ ಇರುತ್ತದೆ. ಅಧಿಕಾರವನ್ನು ವಾಮ ಮಾರ್ಗದ ಮೂಲಕ ಸಾಧಿಸಬಾರದು ಎಂದು ಹೇಳಿದ್ದಾರೆ.
ಈಗ ಸಿದ್ದರಾಮಯ್ಯ ನಾನೇ ಐದು ವರ್ಷ ಆಡಳಿತ ಮಾಡುತ್ತೇನೆ ಎನ್ನುತ್ತಾರೆ. ಆಸೆ ಇರುವುದು ಸಹಜ. ಆ ಬಗ್ಗೆ ತಪ್ಪು ತಿಳಿದುಕೊಳ್ಳುವುದಕ್ಕೆ ಆಗುವುದಿಲ್ಲ. ಡಿಸಿಎಂ ಆದವರಿಗೆ ಮುಖ್ಯಮಂತ್ರಿ ಆಗಬೇಕು ಎಂದು ಆಸೆ ಪಡುತ್ತಾರೆ. ಆದರೆ ಕೆಲವೊಂದು ಸಾರಿ ಉಪಮುಖ್ಯಮಂತ್ರಿಯಾಗಿ ನಿವೃತ್ತಿ ಆಗಬಹುದು. ನನಗೆ ಅಧಿಕಾರ ಸಿಗಲಿಲ್ಲ ಎಂದು ಪಶ್ಚಾತ್ತಾಪ ಪಡುವುದು ಬೇಡ ಎಂದಿದ್ದಾರೆ.
ಎಷ್ಟು ವರ್ಷ ಮುಖ್ಯಮಂತ್ರಿ ಆಗಿದ್ದೇನೆ ಎನ್ನುವುದು ಮುಖ್ಯವಲ್ಲ, ಮುಖ್ಯಮಂತ್ರಿ ಆಗಿದ್ದವರಿಗೆ ಮುಂದುವರಿಯಬೇಕೆಂಬ ಆಸೆ ಇರುತ್ತದೆ. 1979 ರಿಂದ 95 ರವರೆಗೆ ಪಕ್ಷದ ಸಂಘಟನೆ ನಾನೇ ನಿರ್ವಹಿಸಿದ್ದೇನೆ. ಆದರೆ ಆಗ ನನ್ನ ಬದಲು ಆರ್. ಗುಂಡೂರಾವ್ ಮುಖ್ಯಮಂತ್ರಿಯಾದರು, ಗುಂಡೂರಾವ್ ಬಳಿಕ ಎಸ್. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದರು. ಅದಕ್ಕಿಂತ ಮೊದಲು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದರು. ಆದರೆ ನಾನು ಆಗ ಮುಖ್ಯಮಂತ್ರಿ ಆಗಲಿಲ್ಲ ಎಂದು ಪಶ್ಚತ್ತಾಪ ಪಡಲಿಲ್ಲ. ನಮಗೆ ಅರ್ಹತೆ ಇದ್ದರೆ ಸರದಿ ಬಂದರೆ ಮುಖ್ಯಮಂತ್ರಿ ಆಗುತ್ತೇವೆ. 1980 ರಲ್ಲಿ ನಾನು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಆಗಲಿಲ್ಲ ಮುಖ್ಯಮಂತ್ರಿ ಆಗಲು ನಾನು 10 ವರ್ಷ ಕಾದಿದ್ದೇನೆ. ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಅಂತ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಗ್ಯಾರಂಟಿ ಯೋಜನೆ ಬಗ್ಗೆ ಹಗುರವಾಗಿ ಮಾತನಾಡಬಾರದು. ಹಸಿವಿನಿಂದ ದೇಶವನ್ನು ಮುಕ್ತ ಮಾಡಬೇಕು, ಈ ಗ್ಯಾರಂಟಿಗಳು ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಬಿಜೆಪಿಯವರು ಗ್ಯಾರಂಟಿ ಯೋಜನೆ ಟೀಕೆಸಿ ರಾಜಕಾರಣ ಮಾಡುತ್ತಿದ್ದಾರೆ. ಟೀಕೆ ಮಾಡಿ ಬೇರೆ ರಾಜ್ಯದಲ್ಲಿ ಅವುಗಳನ್ನೇ ಜಾರಿ ಮಾಡುತ್ತಿದ್ದಾರೆ. ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಇಲ್ಲ. ನಾನು ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದವನು. ಸರಿಯಾಗಿ ಆಡಳಿತ ಮಾಡಿದರೆ, ಲಂಚ ನಿಂತರೆ ಎಲ್ಲದಕ್ಕೂ ಹಣ ಇದೆ ಎಂದು ಹೇಳಿದ್ದಾರೆ.