ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎನ್ನುವ ಮಾತಿಗೆ ಅಮೆರಿಕದಲ್ಲಿ ನಡೆದ ಈ ವಿಚಿತ್ರ ಪ್ರೇಮಕಥೆ ಸಾಕ್ಷಿಯಾಗಿದೆ. ಕೇವಲ 19 ವರ್ಷದ ಇಯಾ ಎಂಬ ಯುವತಿ ತನ್ನ ತಂದೆಯಷ್ಟೇ ವಯಸ್ಸಿನ 41 ವರ್ಷದ ರಫಾ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಅಷ್ಟೇ ಅಲ್ಲ, 19ರ ಹರೆಯದಲ್ಲೇ ಮಗುವಿಗೂ ಜನ್ಮ ನೀಡಿದ್ದಾಳೆ.
ಇಯಾ ಮತ್ತು ರಫಾ ಮೊದಲು ಭೇಟಿಯಾಗಿದ್ದು ಇಯಾ ಕೆಲಸ ಮಾಡುತ್ತಿದ್ದ ಬಾರ್‌ನಲ್ಲಿ. ಮೊದಲ ನೋಟದಲ್ಲೇ ಪರಸ್ಪರ ಆಕರ್ಷಿತರಾದ ಇವರು, ಕೆಲವೇ ದಿನಗಳಲ್ಲಿ ಹತ್ತಿರವಾದರು. ರಫಾ ಮೊದಲು ಇಯಾ ವಯಸ್ಸಿನಲ್ಲಿ ದೊಡ್ಡವಳು ಎಂದುಕೊಂಡಿದ್ದನಂತೆ. ಆದರೆ, ಆಕೆಯ ನಿಜವಾದ ವಯಸ್ಸು ತಿಳಿದಾಗಲೂ ಅವರ ಪ್ರೀತಿ ಕಡಿಮೆಯಾಗಲಿಲ್ಲ. ಭೇಟಿಯಾದ ಕೇವಲ ಮೂರು ವಾರಗಳಲ್ಲಿ ಇಯಾ ರಫಾ ಜೊತೆ ವಾಸಿಸಲು ಹೋದಳು ಮತ್ತು ಎಂಟು ತಿಂಗಳ ನಂತರ ಮದುವೆಗೆ ಒಪ್ಪಿಕೊಂಡಳು.
ಈ ಅಸಾಮಾನ್ಯ ಜೋಡಿ ತಮ್ಮ ಪ್ರೇಮ ಜೀವನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಕೈಗಳಿಂದ ಹೃದಯದ ಆಕಾರ ಮಾಡಿ ಕಿಸ್ ಮಾಡುತ್ತಿರುವ ವಿಡಿಯೊವನ್ನು ಇತ್ತೀಚೆಗೆ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಆದರೆ, ಇವರ ಪ್ರೀತಿಗೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ವಯಸ್ಸಿನ ಅಂತರವನ್ನು ಟೀಕಿಸಿದರೆ, ಇನ್ನೂ ಕೆಲವರು ಪ್ರೀತಿಗೆ ಎಲ್ಲೆಗಳಿಲ್ಲ ಎಂದು ಬೆಂಬಲಿಸಿದ್ದಾರೆ.
ಇಷ್ಟೇ ಅಲ್ಲದೆ, ರಫಾಗೆ ಹಿಂದಿನ ಸಂಬಂಧದಿಂದ ಮಗಳಿದ್ದು, ಆಕೆ ಇಯಾಗಿಂತ ಕೇವಲ ಒಂದು ವರ್ಷ ಚಿಕ್ಕವಳು ಎಂಬುದು ಮತ್ತೊಂದು ಅಚ್ಚರಿಯ ವಿಷಯ. ರಫಾ ಈ ಬಗ್ಗೆ ಪ್ರತಿಕ್ರಿಯಿಸಿ, ವಯಸ್ಸಿನ ಅಂತರವನ್ನು ತಾನು ಗಮನಿಸುವುದಿಲ್ಲ ಎಂದಿದ್ದಾನೆ. ಇಯಾ ಕೂಡ ವಯಸ್ಸನ್ನು ಲೆಕ್ಕಿಸದೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಹೇಳಿಕೊಂಡಿದ್ದಾಳೆ. ಒಟ್ಟಿನಲ್ಲಿ, ಈ ವಿಚಿತ್ರ ಪ್ರೇಮಕಥೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.