ಬೆಂಗಳೂರು: ಮುಷ್ಕರ ಹಿಂಪಡೆಯುವಂತೆ ಲಾರಿ ಮಾಲೀಕರ ಸಂಘದ ಜೊತೆ ಸರ್ಕಾರ ನಡೆಸಿದ್ದ ಸಂಧಾನ ಸಭೆ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ಲಾರಿ ಮಾಲಿಕರು ಮುಷ್ಕರ ವಾಪಾಸ್ ಪಡೆದಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಜೊತೆ 3ನೇ ಸುತ್ತಿನ ಮಾತುಕತೆ ಬಳಿಕ ಲಾರಿ ಮಲೀಕರ ಸಂಘದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಮುಷ್ಕರ ವಾಪಾಸ್ ಪಡೆಯಲು ನಿರ್ಧರಿಸಿದ್ದಾರೆ.
ಡೀಸೆಲ್ ಬೆಲೆ ಕಡುಮೆ ಮಾಡಬೇಕು, ಲಾರಿ ಚಾಲಕರ ಮೇಲಿನ ಹಲ್ಲೆ ನಿಲ್ಲಬೇಕು, ಬೆಂಗಳೂರು ನಗರಕ್ಕೆ ಸರಕು ಸಾಗಣೆ ಲಾರಿ ನೋ ಎಂಟ್ರಿ ಆದೇಶ ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಏ.14ರ ಮಧ್ಯರಾತ್ರಿಯಿಂದ ರಾಜ್ಯಾದ್ಯಂತ ಲಾರಿ ಮಾಲೀಕರು ಮುಷ್ಕರ ಆರಂಭಿಸಿದ್ದರು. ಇದರಿಂದ ರಾಜ್ಯದಲ್ಲಿ ಲಾರಿ ಸಂಚಾರ, ಸರಕು ಸಾಗಣೆ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು.
ಮುಷ್ಕರ ಹಿಂಪಡೆಯುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ರಾಮಲಿಂಗಾರೆಡ್ಡಿ ಎರಡು ಬಾರಿ ಸಭೆ ನಡೆಸಿ ಮನವಿ ಮಾಡಿದರೂ ಲಾರೀ ಮಾಲೀಕರು ಒಪ್ಪಿರಲಿಲ್ಲ. ಇದೀಗ ಸಾರಿಗೆ ಸಚಿವರ ನೇತೃತ್ವದಲ್ಲಿ ಸರ್ಕಾರದ ಮೂರನೇ ಸಭೆ ಯಶಸ್ವಿಯಾಗಿದ್ದು, ಮುಷ್ಕರ ಹಿಂಪಡೆಯಲು ಲಾರಿ ಮಾಲೀಕರು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.