ಶಿವಮೊಗ್ಗ: ಅಂಗವಿಕಲರ ಸರ್ಟಿಫಿಕೇಟ್ ನೀಡಲು 1,500 ರೂ. ಲಂಚ ಪಡೆಯುತ್ತಿದ್ದ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯ ಕ್ಲರ್ಕ್ ನೀಲಕಂಠಗೌಡ ಲೋಕಾಯುಕ್ತ ಬಲಗೆ ಬಿದ್ದವರು. ಸಾಗರ ತಾಲೂಕು ಆಚಾಪುರದ ಅಂದಾಸುರ ಗ್ರಾಮದ ನಾಗರಾಜ್ ಅವರ ಪುತ್ರಿಗೆ ಶಿಕ್ಷಣ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಅಂಗವಿಕಲರ ಸರ್ಟಿಫಿಕೇಟ್ ಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ನಂತರ ಅರ್ಜಿ, ಭಾವಚಿತ್ರ ದಾಖಲೆಗಳನ್ನು ಮೆಗ್ಗಾನ್ ಆಸ್ಪತ್ರೆಯ ಕ್ಲರ್ಕ್ ನೀಲಕಂಠಗೌಡರಿಗೆ ನೀಡಲಾಗಿತ್ತು. ಪ್ರಮಾಣ ಪತ್ರ ಸಿದ್ಧಪಡಿಸಿಕೊಡಲು 1500 ರೂ.ಗೆ ನೀಲಕಂಠಗೌಡ ಬೇಡಿಕೆ ಇಟ್ಟಿದ್ದರು. ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ನಾಗರಾಜ್ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಮೆಗ್ಗಾನ್ ಆಸ್ಪತ್ರೆ ಕಚೇರಿಯಲ್ಲಿ 1500 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಹಣದ ಸಮೇತ ನೀಲಕಂಠಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಲೋಕಾಯುಕ್ತ ಎಸ್.ಪಿ. ಮಂಜುನಾಥ ಚೌದರಿ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್, ಇನ್ಸ್ಪೆಕ್ಟರ್ ಗಳಾದ ವೀರಬಸಪ್ಪ ಎಲ್ ಕುಸಲಾಪುರ, ರುದ್ರೇಶ್ ಕೆ.ಪಿ., ಗುರುರಾಜ್ ಎನ್ ಮೈಲಾರ, ಹಾಗೂ ಸಿಬ್ಬಂದಿಗಳಾದ ಯೋಗೇಶ್ ಜೆ.ಸಿ., ಮಂಜುನಾಥ್ ಎಂ., ಬಿ.ಟಿ. ಚನ್ನೇಶ್, ಪ್ರಶಾಂತ್ ಕುಮಾರ್, ಪ್ರಕಾಶ್ ಬಾಮರದ, ಅರುಣ್ ಕುಮಾರ್, ಆದರ್ಶ್, ಅಂಜಲಿ, ಚಂದ್ರಿಬಾಯಿ, ಪ್ರದೀಪ್, ಗಂಗಾಧರ್, ಆನಂದ್, ಗೋಪಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.