
ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲೂಕು ಮಾಳಗಾಳು ಗ್ರಾಮದಲ್ಲಿ ಯುವಕರ ಗುಂಪೊಂದು ಭಾನುವಾರ ರಾತ್ರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವೈರಮುಡಿ ಅವರ ಪುತ್ರ ಅನೀಶ್ ಮೇಲೆ ಹಲ್ಲೆ ನಡೆಸಿ ಮುಂಗೈ ಕತ್ತರಿಸಿದೆ.
ದಲಿತರ ಕಾಲೋನಿಗೆ ನುಗ್ಗಿದ ಗುಂಪು ಅನೀಶ್ ಮೇಲೆ ಹಲ್ಲೆ ಮಾಡಿ ಕೈ ಕತ್ತರಿಸಿ ಹಾಕಿದೆ. ಅನೀಶ್ ಎಡಗೈ ತುಂಡಾಗಿದ್ದು, ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮಾವ ಪಿ.ಎಲ್.ಡಿ. ಬ್ಯಾಂಕ್ ಉದ್ಯೋಗಿ ಲಕ್ಷ್ಮಣ ಮತ್ತು ಗೋವಿಂದರಾಜು ಅವರ ಮೇಲೆ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರನ್ನು ಕನಕಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯರು ಸೇರಿದಂತೆ 7 ಜನರ ಮೇಲೆ ಗುಂಪು ಹಲ್ಲೆ ನಡೆಸಿದ್ದು ಮನೆಯ ಮುಂದೆ ನಿಲ್ಲಿಸಿದ್ದ ಎರಡು ಆಟೋಗಳನ್ನು ಜಖಂಗೊಳಿಸಿದೆ.
ಹರ್ಷ, ಕರುಣೇಶ್, ರಾಹುಲ್, ಶಿವ, ಶಶಾಂಕ, ದರ್ಶನ್ ಸೇರಿದಂತೆ ಇತರರ ವಿರುದ್ಧ ಎಸ್ಸಿ ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಕೊಲೆ ಯತ್ನ ಆರೋಪದಡಿ ಕನಕಪುರ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದುವರೆಗೂ ಯಾರನ್ನು ಬಂಧಿಸಿಲ್ಲ. ಘಟನೆ ನಡೆದ ಗ್ರಾಮ ವಿಧಾನಪರಿಷತ್ ಸದಸ್ಯ ಎಸ್. ರವಿಯವರ ಸ್ವಗ್ರಾಮವಾಗಿದೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಸ್‌ಪಿ ಕಾರ್ತಿಕ್ ರೆಡ್ಡಿ ಗ್ರಾಮಕ್ಕೆ ನೀಡಿ ಮಾಹಿತಿ ಪಡೆದಿದ್ದಾರೆ.