ವಿಜಯಪುರ: ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ವಿಪಕ್ಷ ಬಿಜೆಪಿ ಅಭ್ಯರ್ಥಿಗಳು ಹೀನಾಯ ಸೋಲನುಭವಿಸಿದ್ದಾರೆ. ಬಿಜೆಪಿ ಸೋಲಿನ ವಿಚಾರವಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದಕ್ಕೆಲ್ಲ ಕಾರಣ ಅಪ್ಪ-ಮಗ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಈ ಸೋಲಿಗೆಲ್ಲ ಕಾರಣ ಪೂಜ್ಯ ತಂದೆ ಹಾಗೂ ಕಿರಿಯ ಮಗ ಎಂದು ಹೇಳುವ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ಟೀಕಿಸಿದ್ದಾರೆ.
ವಿಜಯೇಂದ್ರ ನೇತೃತ್ವವನ್ನು ರಾಜ್ಯದ ಜನ ಒಪ್ಪಿಲ್ಲ. ಈ ವಿಚಾರ ವಿಜಯೇಂದ್ರಗೂ ಗೊತ್ತು. ಬಿಜೆಪಿಗೆ ಎಲ್ಲಾ ಬಾಗಿಲು ಬಂದ್ ಆದಂತಿವೆ. ಉಪಚುನವಣೆಯಲ್ಲಿ ಈ ರೀತಿ ಸೋಲಿಗೆ ಅವರೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಆದರೆ ಒಳ ಒಪ್ಪಂದದಿಂದ ಬಿಜೆಪಿಗೆ ಇಂತಹ ಪರಿಸ್ಥಿತಿ ಬಂದಿದೆ. ಇನ್ನಾದರೂ ಹೈಕಮಾಂಡ್ ಈ ರಾಜ್ಯದ ಪಕ್ಷದ ಉಸ್ತುವಾರಿಯನ್ನು ಪ್ರಾಮಾಣಿಕರಿಗೆ, ಸಂಸ್ಕಾರ ಇದ್ದರವರಿಗೆ ವಹಿಸಲಿ ಎಂದರು.
ಇದೇ ವೇಳೆ ಈ ಹಿಂದೆ ಅರುಣ್ ಸಿಂಗ್ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರಗೆ ಸಂದೇಶ ವಾಹಕನಾಗಿ ಕೆಲಸ ಮಾಡಿದ ಪರಿಣಾಮ ಬಿಜೆಪಿಗೆ ಈಗ ಈ ಗತಿ ಬಂದಿದೆ ಎಂದು ಯತ್ನಾಳ್ ಸ್ವಪಕ್ಷದ ವಿರುದ್ಧವೇ ಹರಿಹಾಯ್ದಿದ್ದಾರೆ.