ಕಲಬುರಗಿ: ವಕ್ಫ್ ವಿರುದ್ಧ ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಹೋರಾಟ ನಡೆಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಟೀಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಯತ್ನಾಳ್ ಕಿಡಿಕಾರಿದ್ದಾರೆ. ನಾವು ಹೋರಾಟ ಮಾಡಿದ್ರೆ ನೀವ್ಯಾಕೆ ಟೆನ್ಶನ್ ತಗೋತಿರಿ? ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ಹಾಗೂ ಟಿಂ ಪ್ರತಿಷ್ಠೆಗಾಗಿ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವುದು ಅವರಿಗೆ ಶೋಭೆತರಲ್ಲ. ನಮ್ಮ ಜೊತೆ ಸೇರಿ ಒಗ್ಗಟ್ಟಿಗೆ ಸಹಕರಿಸಿ ಎಂದು ಗುಡುಗಿದ್ದ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಯತ್ನಾಳ್, ನಾವು ಹೋರಾಟ ಮಾಡಿದ್ರೆ ನಿಮಗ್ಯಾಕೆ ಭಯ? ಇಲ್ಲಿ ಯಾರೂ ಸಿಎಂ ಆಗಲು ಹೋರಾಟ ಮಾಡುತ್ತಿಲ್ಲ. ನಮ್ಮ ಹೋರಾಟಕ್ಕೆ ಯಾಕೆ ಟೆನ್ಶನ್ ತಗೋತೀರಿ? ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ನಾವು ಹೋರಾಟ ನಡೆಸುತ್ತಿರುವುದು ರೈತರ ಜಾಗೃತಿಗಾಗಿ, ಬಡ ರೈತರ ಭೂಮಿ ವಿಚಾರವಾಗಿ ಅವರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹೊರತು ಯಾವುದೇ ರಾಜಕೀಯ ಹೋರಾಟ ನಡೆಸುತ್ತಿಲ್ಲ. ಬಿ.ಎಸ್.ಯಡಿಯೂರಪ್ಪ ಏನಾದರೂ ಹೇಳಲಿ, ವಿಜಯೇಂದ್ರ ಏನಾದರೂ ಹೇಳಲಿ. ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಇದೇ ವೇಳೆ ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಯತ್ನಾಳ್, ವಿಜಯೇಂದ್ರ ಎಲ್ಲಿ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ? ಯಾವ ಹಳ್ಲಿಗೆ ಹೋಗಿ ಐತರ ಮನವಿ ಸ್ವೀಕರಿಸಿದ್ದಾನೆ? ರಾತ್ರಿಯಾದರೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮನೆಯಲ್ಲಿರ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಮೇಲೆ ನೂರೆಂಟು ಕೇಸ್ ಇದೆ. ಕಾಪಾಡೋ ಶಿವಪ್ಪ, ಅಂತ ಡಿ.ಕೆ.ಮನೆಯಲ್ಲಿ ಇರ್ತಾರೆ. ಇಲ್ಲ ಕಾಪಾಡೋ ಸಿದ್ದರಾಮಯ್ಯ ಅಂತ ಅವ್ರ ಮನೆಯಲ್ಲಿರ್ತಾರೆ ಎಂದು ವ್ಯಂಗ್ಯವಾಡಿದರು.