ಬೆಂಗಳೂರು: ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯ ಚಿಕಿತ್ಸಾ ದರಕ್ಕೆ ಸಮನಾಗಿ ಯಶಸ್ವಿನಿ ಯೋಜನೆಯ ಚಿಕಿತ್ಸಾ ದರ ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 15 -20 ವರ್ಷಗಳ ಹಿಂದೆ ನಿಗದಿಪಡಿಸಿದ್ದ ಚಿಕಿತ್ಸಾ ದರವೇ ಈಗಲೂ ಇದ್ದು, ಅದನ್ನು ಪರಿಷ್ಕರಿಸುವಂತೆ ಖಾಸಗಿ ಆಸ್ಪತ್ರೆಗಳು ಒತ್ತಾಯಿಸುತ್ತಿದ್ದ ಹಿನ್ನಲೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಚಿಕಿತ್ಸಾ ದರಕ್ಕೆ ಸಮನಾಗಿ ಯಶಸ್ವಿನಿ ಯೋಜನೆ ಚಿಕಿತ್ಸಾ ದರಗಳನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಯಶಸ್ವಿನಿ ಯೋಜನೆಯಡಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಒಂದು ವಾರದೊಳಗೆ ಆಸ್ಪತ್ರೆಗಳಿಗೆ ಬಿಲ್ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಯೋಜನೆಯಡಿ ನೋಂದಾಯಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಯಾವುದೇ ಸಮಸ್ಯೆಯಾಗದು ಎಂದು ತಿಳಿಸಿದ್ದಾರೆ.