ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನವದೆಹಲಿಯ ಜಂತರ್ ಮಂತರ್ ನಲ್ಲಿ ದೇಶದ ಪ್ರಮುಖ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವಿಚಾರ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲನ್ನು ಸಹ ಏರಿದ್ದು, ಇದರ ಮಧ್ಯೆ ಪ್ರತಿಭಟನಾನಿರತ ಕುಸ್ತಿಪಟುಗಳು ಬುಧವಾರ ಬೆಳಿಗ್ಗೆ ತಾವಿರುವ ಜಾಗದಲ್ಲಿಯೇ ತರಬೇತಿ ಆರಂಭಿಸಿದ್ದಾರೆ. ಕೋಚ್ ಸುಜಿತ್ ಮಾನ್ ಇವರುಗಳಿಗೆ ತರಬೇತಿ ನೀಡಿದ್ದಾರೆ.
ಮುಂಬರುವ ಏಷ್ಯನ್ ಗೇಮ್ಸ್, ಒಲಂಪಿಕ್ಸ್ ಅರ್ಹತಾ ಕೂಟಗಳ ಕಾರಣಕ್ಕೆ ಕುಸ್ತಿಪಟುಗಳಿಗೆ ತರಬೇತಿ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಭಜರಂಗ್ ಪೂನಿಯಾ, ವಿನೇಶ್ ಪೋಗಟ್, ಸಂಗೀತ ಪೋಗಟ್, ಸಾಕ್ಷಿ ಮಲ್ಲಿಕ್, ಸತ್ಯವರ್ಥ್ ಕದಿಯನ್ ಮೊದಲಾದವರು ತರಬೇತಿ ಪಡೆದಿದ್ದಾರೆ. ರಸ್ತೆಯಲ್ಲೇ ಅಭ್ಯಾಸ ನಡೆಸುತ್ತಿರುವುದರಿಂದ ಕ್ರೀಡಾಪಟುಗಳಿಗೆ ಗಾಯಗಳಾಗುವ ಅಪಾಯ ಹೆಚ್ಚಾಗಿದ್ದು, ಆದರೆ ನಮಗೆ ಬೇರೆ ಆಯ್ಕೆಗಳಿಲ್ಲ ಎಂದು ಕೋಚ್ ಸುಜಿತ್ ಮಾನ್ ಹೇಳಿದ್ದಾರೆ.