ವಿಶ್ವದ ಶ್ರೀಮಂತರ ವ್ಯಕ್ತಿಗಳ ಬಗ್ಗೆ ಮಾತನಾಡುವಾಗ ನಮಗೆ ಮುಖೇಶ್ ಅಂಬಾನಿ, ಎಲಾನ್ ಮಸ್ಕ್, ಜೆಫ್ ಬೆಜೋಸ್, ಬರ್ನಾರ್ಡ್ ಅರ್ನಾಲ್ಟ್, ಮಾರ್ಕ್ ಜುಕರ್‌ಬರ್ಗ್ ಹೆಸರು ನೆನಪಿಗೆ ಬರುತ್ತದೆ. ಆದ್ರೆ ಇವರನ್ನು ಹೊರತುಪಡಿಸಿ ನಮ್ಮಲ್ಲಿ ಅನೇಕ ಶ್ರೀಮಂತರಿದ್ದಾರೆ. ಇವರಿಗಿಂತ ಹೆಚ್ಚು ಆಸ್ತಿ ಹೊಂದಿರುವ ಶ್ರೀಮಂತರೂ ನಮ್ಮಲ್ಲಿದ್ರು ಅಂದ್ರೆ ನೀವು ನಂಬ್ಲೇಬೇಕು.
ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಟ್ಯಾಂಗ್ ರಾಜವಂಶದ ಮಹಾರಾಣಿ ವೂ ಒಬ್ಬರಾಗಿದ್ದರು. ಅವರ ಸಂಪತ್ತು ಸುಮಾರು 16 ಟ್ರಿಲಿಯನ್ ಡಾಲರ್ ಆಗಿತ್ತು. ಚೀನಾದ ಮಹಾರಾಣಿ ವೂ ಇತಿಹಾಸದಲ್ಲಿ ಶ್ರೀಮಂತ ಮಹಿಳಾ ಚಕ್ರವರ್ತಿ. ವೂ ತುಂಬಾ ಕ್ರೂರ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಇತಿಹಾಸ ತಜ್ಞರು ಹೇಳ್ತಾರೆ. ಅಧಿಕಾರದಲ್ಲಿ ಇರಲು ವೂ, ತನ್ನ ಮಕ್ಕಳನ್ನೇ ಕೊಂದಿದ್ದರಂತೆ. ಮಹಾರಾಜ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಮೇಲೆ ಅಧಿಕಾರಕ್ಕೆ ಬಂದ ವೂ, ಅರಮನೆಯಲ್ಲಿ 12ಕ್ಕೂ ಹೆಚ್ಚು ಮಂದಿಯ ಹತ್ಯೆ ಮಾಡಿಸಿದ್ದರು.
ಗೂಢಾಚಾರಿಗಳನ್ನು ನೇಮಿಸಿಕೊಂಡಿದ್ದ ವೂ, ಆಡಳಿತದ ವಿರುದ್ಧ ದಂಗೆ ಏಳಲು ಮುಂದಾದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಿಸುತ್ತಿದ್ದರು. ಆದ್ರೆ ಅವರು ಬಡವರ ಪರ ಅನೇಕ ಕೆಲಸಗಳನ್ನು ಮಾಡಿದ್ದರು. ಹಾಗಾಗಿ ಮಹಾರಾಣಿ ವೂರನ್ನು ಬಡವರ ಬಂಧು ಎಂದು ಕರೆಯಲಾಗಿದೆ. ವೂ ಕ್ರೂರಿಯಲ್ಲ, ದಯೆ ಹೊಂದಿದ್ದ ಮಹಾರಾಣಿ ಎನ್ನುವವರ ಸಂಖ್ಯೆಯೂ ಸಾಕಷ್ಟಿದೆ. ವೂ ಸರಿಸುಮಾರು 15 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಮಧ್ಯ ಏಷ್ಯಾಕ್ಕೆ ಚೀನೀ ಸಾಮ್ರಾಜ್ಯದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಆಳ್ವಿಕೆಯಲ್ಲಿ, ಚೀನಾದ ಆರ್ಥಿಕತೆಯು ಚಹಾ ಮತ್ತು ರೇಷ್ಮೆ ವ್ಯಾಪಾರದೊಂದಿಗೆ ಗಮನಾರ್ಹ ಬೆಳವಣಿಗೆಯನ್ನು ಕಂಡಿತ್ತು.