ವಿಶ್ವದ ಅತ್ಯಂತ ಶ್ರೀಮಂತ ಶೇಕಡಾ ಒಂದರಷ್ಟು ಜನರು ಕಳೆದ ದಶಕದಲ್ಲಿ ತಮ್ಮ ಒಟ್ಟು ಸಂಪತ್ತಿನಲ್ಲಿ 40 ಟ್ರಿಲಿಯನ್ ಡಾಲರ್ ವೃದ್ಧಿ ಕಂಡಿದ್ದಾರೆ ಎಂದು ಆಕ್ಸ್ ಫ್ಯಾಮ್ ಹೇಳಿದೆ. ಬ್ರೆಜಿಲ್‌ನಲ್ಲಿ ನಡೆಯುವ G20 ಶೃಂಗಸಭೆಯ ಮೊದಲು ಆಕ್ಸ್ ಫ್ಯಾಮ್ ಈ ಹೇಳಿಕೆ ನೀಡಿದೆ. ಸೂಪರ್ ಶ್ರೀಮಂತರಿಗೆ ತೆರಿಗೆ ವಿಧಿಸುವುದು G20 ಶೃಂಗಸಭೆಯ ಅಜೆಂಡಾದಲ್ಲಿ ಅಗ್ರಸ್ಥಾನದಲ್ಲಿರುವ ಕಾರಣ ಆಕ್ಸ್ ಫ್ಯಾಮ್ ಹೇಳಿಕೆ ವಿಶೇಷತೆ ಪಡೆದಿದೆ.
ಆಕ್ಸ್ ಫ್ಯಾಮ್ ಪ್ರಕಾರ, ವಿಶ್ವದಲ್ಲಿ ಶ್ರೀಮಂತರ ಸಂಖ್ಯೆ ಒಂದ್ಕಡೆ ಹೆಚ್ಚಾಗ್ತಿದ್ದು, ಅವರ ಮೇಲೆ ವಿಧಿಸುವ ತೆರಿಗೆ ಐತಿಹಾಸಿಕ ಕನಿಷ್ಠಕ್ಕೆ ಕುಸಿದಿದೆ. ಆದ್ರೆ ಇನ್ನೊಂದು ಭಾಗದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದೆ. ಈ ಶ್ರೀಮಂತರ ಹಣ, ಬಡವರ ಸಂಪತ್ತಿನ ಶೇಕಡಾ 36ಕ್ಕಿಂತ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶ್ವದ ಶ್ರೀಮಂತರು ತಮ್ಮ ಆಸ್ತಿಯ ಶೇಕಡಾ 0.5ಕ್ಕಿಂತ ಕಡಿಮೆ ತೆರಿಗೆಯನ್ನು ಪಾವತಿ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಶೃಂಗಸಭೆಯಲ್ಲಿ ಬಿಲಿಯನೇರ್‌ಗಳು ಮತ್ತು ಇತರ ಹೆಚ್ಚಿನ ಆದಾಯ ಗಳಿಸುವವರಿಗೆ ಹೆಚ್ಚಿನ ತೆರಿಗೆ ವಿಧಿಸುವ ವಿಧಾನಗಳ ಬಗ್ಗೆ ಚರ್ಚೆಯಾಗಲಿದೆ. ಫ್ರಾನ್ಸ್, ಸ್ಪೇನ್, ದಕ್ಷಿಣ ಆಫ್ರಿಕಾ, ಕೊಲಂಬಿಯಾ ಮತ್ತು ಆಫ್ರಿಕನ್ ಇದರ ಪರವಾಗಿದ್ದರೆ, ಯುನೈಟೆಡ್ ಸ್ಟೇಟ್ಸ್ ಇದರ ವಿರುದ್ಧವಾಗಿದೆ.