ಭಾರತದ ದೇವಾಲಯಗಳು ಮತ್ತು ಅವುಗಳ ಭವ್ಯತೆ ಜಗತ್ಪ್ರಸಿದ್ಧವಾಗಿದೆ. ಪ್ರಪಂಚದ ಮೂಲೆ ಮೂಲೆಗಳಿಂದಲೂ ಭಾರತದ ದೇವಾಲಯಗಳನ್ನು ನೋಡಲು ಭಕ್ತರು, ಪ್ರವಾಸಿಗರು ಬರುತ್ತಾರೆ. ಇಲ್ಲಿನ ದೇವಾಲಯಗಳ ಸುಂದರವಾದ ವಾಸ್ತುಶಿಲ್ಪವು ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತದೆ. ಇದೀಗ ಇಡೀ ವಿಶ್ವವನ್ನೇ ಸೆಳೆಯಬಲ್ಲ ಅತ್ಯಂತ ಸುಂದರವಾದ ದೇವಾಲಯವೊಂದು ರಾಜಸ್ಥಾನದ ಪಾಲಿಯಲ್ಲಿ ನಿರ್ಮಾಣವಾಗುತ್ತಿದೆ. ವಿಶೇಷವೆಂದರೆ ಇದು ‘ಓಂ’ ಆಕಾರದ ದೇವಾಲಯ.
ಓಂ ಆಕಾರದಲ್ಲಿ ನಿರ್ಮಿಸಲಾದ ಜಗತ್ತಿನ ಮೊದಲ ದೇವಸ್ಥಾನವಿದು. ಭೂಮಿಯಿಂದ ಮಾತ್ರವಲ್ಲದೆ ಬಾಹ್ಯಾಕಾಶದಿಂದಲೂ ಬಹಳ ಸುಂದರವಾಗಿ ಕಾಣುತ್ತದೆ. ರಾಜಸ್ಥಾನದ ಪಾಲಿ ಜಿಲ್ಲೆಯ ಜಡಾನ್ ಗ್ರಾಮದಲ್ಲಿ ಭವ್ಯವಾದ ದೇವಸ್ಥಾನ ತಲೆಯೆತ್ತಲಿದೆ. ಇದೊಂದು ಶಿವ ದೇವಾಲಯ. ಈ ದೇವಾಲಯದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು 2024ರಲ್ಲಿಯೇ ಇದು ಲೋಕಾರ್ಪಣೆಯಾಗುವ ಸಾಧ್ಯತೆಯಿದೆ.
250 ಎಕರೆ ಜಾಗದಲ್ಲಿ ಓಂ ಆಕಾರದ ಈ ಶಿವ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಶಿವಲಿಂಗದ ಪ್ರತಿಷ್ಠಾಪನೆ ಕಾರ್ಯಕ್ರಮವು ಫೆಬ್ರವರಿ ತಿಂಗಳಿನಲ್ಲೇ ನೆರವೇರಲಿದೆ. ಇಲ್ಲಿ 1008 ಶಿವನ ವಿವಿಧ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ಆವರಣದಲ್ಲಿ ಒಟ್ಟು 108 ಕೊಠಡಿಗಳಿವೆ. ಇದರ ಶಿಖರವು 135 ಅಡಿ ಎತ್ತರವಾಗಿದೆ ಮತ್ತು ದೇವಾಲಯದ ಮಧ್ಯದಲ್ಲಿ ಗುರು ಮಹಾರಾಜ್ ಸ್ವಾಮಿ ಮಾಧವಾನಂದರ ಸಮಾಧಿಯಿದೆ. ಮೇಲ್ಭಾಗದಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿದೆ.
1995ರಲ್ಲಿಯೇ ದೇವಾಲಯದ ಶಂಕುಸ್ಥಾಪನೆ ನಡೆದಿತ್ತು. ಕಳೆದ 25 ವರ್ಷಗಳಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಾಗರ ಶೈಲಿಯ ವಾಸ್ತುಶಿಲ್ಪ ಮತ್ತು ಉತ್ತರ ಭಾರತದ ವಾಸ್ತುಶಿಲ್ಪದ ಆಧಾರದ ಮೇಲೆ ಇದನ್ನು ನಿರ್ಮಿಸಲಾಗುತ್ತಿದೆ. ಓಂ ಆಕಾರವು ಸುಮಾರು ಅರ್ಧ ಕಿಲೋಮೀಟರ್ ತ್ರಿಜ್ಯದಲ್ಲಿ ಹರಡಿರುವುದು ಮತ್ತೊಂದು ವಿಶೇಷ.