ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಿಸಿದ್ದ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಗೆ ಜಾರಿ ಬಗ್ಗೆ ಗೆಜೆಟ್ ಹೊರಡಿಸಲಾಗಿದೆ.
ಸೆಪ್ಟೆಂಬರ್ 7 ರಿಂದಲೇ ಯೋಜನೆ ಜಾರಿಯಾಗಿದ್ದು, ಮಾರ್ಗಸೂಚಿ ಪ್ರಕಟಿಸಲಾಗಿದೆ. ಈ ಮೂಲಕ ಸರ್ಕಾರದಿಂದ 2.30 ಲಕ್ಷ ಅಸಂಘಟಿತ ಗಿಗ್ ಕಾರ್ಮಿಕರಿಗೆ ಜೀವನ ಭದ್ರತೆ ವಿಮೆ ಸೌಲಭ್ಯ ಕಲ್ಪಿಸಲಾಗುವುದು.
ಝೋಮ್ಯಾಟೋ, ಸ್ವಿಗ್ಗಿ ಮೊದಲಾದ ಆಹಾರ ಡೆಲಿವರಿ ಮಾಡುವವರು, ಅಮೆಜಾನ್, ಫ್ಲಿಪ್ಕಾರ್ಟ್, ಬಿಗ್ ಬಾಸ್ಕೆಟ್ ಮೊದಲದ ಇ- ಕಾಮರ್ಸ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ, ಅರೆಕಾಲಿಕ ಡೆಲಿವರಿ ಸಿಬ್ಬಂದಿ ಈ ಯೋಜನೆ ಫಲಾನುಭವಿಗಳಾಗಿರುತ್ತಾರೆ.
ರಾಜ್ಯದಲ್ಲಿ ಸುಮಾರು 2.30 ಲಕ್ಷ ಈ ಕಾರ್ಮಿಕರಿದ್ದು, ಎಲ್ಲರಿಗೂ ಯೋಜನೆ ಅನ್ವಯವಾಗಲಿದೆ. ಈ ಯೋಜನೆಯ ಅನ್ವಯ ಗಿಗ್ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದವರಾಗಿದ್ದು, ಈಗಿನ ಕಾರ್ಮಿಕ ಕಾಯ್ದೆಯಡಿ ಇರುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರಿಗೆ ವಿಮೆ ಸೌಲಭ್ಯ ಕಲ್ಪಿಸಲಾಗುವುದು.
ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪ್ಲಾಟ್ ಫಾರ್ಮ್ ಆಧಾರಿತ ಕಾರ್ಮಿಕರು ಯೋಜನೆಗೆ ಅರ್ಹರಾಗಿದ್ದು, 18ರಿಂದ 60 ವರ್ಷದವರಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಎಸ್ಐ ಮತ್ತು ಪಿಎಫ್ ಸೌಲಭ್ಯ ಹೊಂದಿರಬಾರದು. ಕಾರ್ಮಿಕರು ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್ ನಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಜೀವ ವಿಮೆಯಡಿ ಫಲಾನುಭವಿ ಮರಣದ ನಂತರ ಕಾನೂನು ಬದ್ಧ ವಾರಸುದಾರರಿಗೆ ಎರಡು ಲಕ್ಷ ರೂ. ವಿಮಾ ಪರಿಹಾರ ನೀಡಲಾಗುವುದು. ಅಪಘಾತ ವಿಮೆಯಿಡಿ ಮರಣ ಪ್ರಕರಣಗಳಲ್ಲಿ ಎರಡು ಲಕ್ಷ ರೂ., ಅಪಘಾತ ಹಾಗೂ 2 ಲಕ್ಷ ರೂ ಜೀವವಿಮೆ ಸೇರಿ 4 ಲಕ್ಷ ರೂ. ಪರಿಹಾರ ನೀಡಲಾಗುವುದು.
ಅಪಘಾತದಿಂದ ಶಾಶ್ವತ, ಭಾಗಶಃ ದುರ್ಬಲತೆಗೆ ಶೇಕಡವಾರು ದುರ್ಬಲತೆ ಆಧಾರದ ಮೇಲೆ 2 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗುವುದು. ಒಂದು ಲಕ್ಷ ರೂ. ವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿಸಲಾಗುವುದು. ಕರ್ತವ್ಯದಲ್ಲಿ ಇಲ್ಲದಿದ್ದಾಗಲೂ ಸಂಭವಿಸುವ ಅಪಘಾತಕ್ಕೂ ಈ ಸೌಲಭ್ಯ ಅನ್ವಯವಾಗಲಿದೆ.
ಮರಣ ಅಪಘಾತ ಸಂದರ್ಭದಲ್ಲಿ ಕಾರ್ಮಿಕರು ರಾಜ್ಯದಲ್ಲಿ ವೃತ್ತಿಯಲ್ಲಿ ಸಕ್ರಿಯವಾಗಿರಬೇಕು. ಪ್ಲಾಟ್ಫಾರ್ಮ್ ಆಧಾರಿತ ಕಾರ್ಮಿಕರು, ಉದ್ಯೋಗದಾತರು, ಅಗ್ರಿಗೇಟರ್ ಸಂಸ್ಥೆಗಳು ನೀಡುತ್ತಿರುವ ಸೌಲಭ್ಯಕ್ಕೆ ಹೆಚ್ಚುವರಿಯಾಗಿ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.