
ಜನರು ಚಿತ್ರವಿಚಿತ್ರ ಆಸೆಗಳನ್ನು ಹೊಂದಿರುತ್ತಾರೆ. ಎಲ್ಲರಿಗಿಂತ ಸುಂದರವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಮೇಕಪ್, ಶಸ್ತ್ರಚಿಕಿತ್ಸೆಗೆ ಒಳಗಾಗೋ ಒಂದಿಷ್ಟು ಮಂದಿಯಿದ್ದಾರೆ. ಬಾರ್ಬಿ ಡಾಲ್ ನಂತೆ ಕಾಣ್ಬೇಕೆಂದು ಶಸ್ತ್ರಚಿಕಿತ್ಸೆಗೆ ಒಳಗಾದ ಹುಡುಗಿ ಇದ್ದಾಳೆ. ಇಡೀ ದೇಹಕ್ಕೆ ಹಚ್ಚೆ ಹಾಕಿಸಿಕೊಂಡ ಜನರೂ ಇದ್ದಾರೆ. ಈ ಹುಡುಗಿ ಆಸೆ ಮತ್ತಷ್ಟು ಭಿನ್ನವಾಗಿದೆ. ಈಕೆಗೆ ಬೆಕ್ಕಿನಂತೆ ಕಾಣ್ಬೇಕೆಂಬ ಹುಚ್ಚು. ಹಾಗಾಗಿ ಅದಕ್ಕೆ ಅಗತ್ಯವಿರುವ ಒಂದಿಷ್ಟು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ.
ಇಟಲಿಯ ರೋಮ್ ನಿವಾಸಿಯಾಗಿರುವ ಈಕೆ ಹೆಸರು ಕಿಯಾರಾ ಡೆಲ್ ಅಬೇಟ್. ಟಿಕ್ ಟಾಕ್ ನಲ್ಲಿ ಪ್ರಸಿದ್ಧಿ ಪಡೆದಿರುವ ಈಕೆ ಅನೇಕ ಫೋಟೋಗಳನ್ನು ಪೋಸ್ಟ್ ಮಾಡ್ತಿರುತ್ತಾಳೆ. 22 ವರ್ಷದ ಕಿಯಾರಾ, ತಾನು ಚೆಂದದ ಹೆಣ್ಣು ಬೆಕ್ಕು ಎಂದಿದ್ದಾಳೆ. 11ನೇ ವಯಸ್ಸಿನಲ್ಲೇ ತನ್ನ ಪ್ರಯತ್ನ ಶುರು ಮಾಡಿದ್ದ ಕಿಯಾರಾ, ಕಿವಿ ಹಿಗ್ಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು.
ಐದು ವರ್ಷಗಳ ನಂತರ ಆಕೆ ದೇಹದ 72 ಕಡೆ ಚುಚ್ಚಿಸಿಕೊಂಡಿದ್ದಾಳೆ. ನಾಲಿಗೆಯನ್ನು ಎರಡು ಭಾಗವಾಗಿ ಕತ್ತರಿಸಿಕೊಂಡಿದ್ದಾಳೆ. ಹಣೆಯ ಮೇಲೆ ಎರಡು ಕೊಂಬುಗಳನ್ನು ಹೊಂದಿದ್ದಾಳೆ. ಟಿಕ್ ಟಾಕ್ ನ ಈಕೆಯ ವಿಡಿಯೋ ಒಂದನ್ನು 65 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದರಲ್ಲಿ ಆಕೆ ತನ್ನ ನಾಲಿಗೆಯನ್ನು ತೋರಿಸುತ್ತಿದ್ದಾಳೆ. ಕಣ್ಣುರೆಪ್ಪೆಗಳ ಕೆಳಗಿನ ಚರ್ಮವನ್ನು ತೆಗೆದುಹಾಕಲು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ಕಾರ್ಟೂನ್ ಪಾತ್ರದಂತೆ ಕಾಣಲು ನಾನು ಬಯಸೋದಿಲ್ಲ. ಬೆಕ್ಕಿನಂತೆ ಕಾಣುವುದು ನನಗೆ ಸೂಕ್ತವಾಗಿದೆ ಎಂದು ಕಿಯಾರಾ ಹೇಳಿದ್ದಾಳೆ. ಈ ಎಲ್ಲ ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಳೆ ಕಿಯಾರಾ.