ಕಡಿಮೆ ಕೆಲಸ ಇರ್ಬೇಕು, ಕೈ ತುಂಬಾ ಸಂಬಳ ಬರ್ಬೇಕು. ಇದು ಪ್ರತಿಯೊಬ್ಬರು ಬಯಸುವಂತಹದ್ದು. ಅಂಥ ಕೆಲಸ ಹುಡುಕೋಕೆ ಜನರು ಸಾಕಷ್ಟು ಪ್ರಯತ್ನಪಡ್ತಾರೆ. ಇದಕ್ಕಾಗಿಯೇ ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿ ನಂತ್ರ ಇಂಟರ್ನ್ಶಿಪ್ ಅದು ಇದು ಅಂತಾ ಮಾಡಿ ಕೆಲಸ ಹುಡುಕ್ತಾರೆ. ಆದ್ರೆ ಎಲ್ಲರಿಗೂ ಇಂಥ ಕೆಲಸ ಸಿಗೋದಿಲ್ಲ. ಹೆಚ್ಚು ದುಡಿಮೆ, ಕಡಿಮೆ ಸಂಬಳಕ್ಕೆ ಅನಿವಾರ್ಯವಾಗಿ ಜನರು ಒಗ್ಗಿಕೊಳ್ಳಬೇಕಾಗುತ್ತದೆ.
ಮಹಿಳೆಯರ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಕಷ್ಟಪಟ್ಟು ಹಿಡಿದ ನೌಕರಿಯನ್ನು ಕೂಡ ಮದುವೆ, ಮಕ್ಕಳಾದ್ಮೇಲೆ ಬಿಡಬೇಕು. ಆದ್ರೆ ಈ ಮಹಿಳೆ ಹಾಗಲ್ಲ. ಯಾವುದೇ ಪದವಿಯಿಲ್ಲದೆ ಹೋದ್ರೂ ದಿನದಲ್ಲಿ ಆರು ಗಂಟೆ ಕೆಲಸ ಮಾಡಿ ವರ್ಷಕ್ಕೆ ಐವತ್ತು ಲಕ್ಷ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ.
ಆಕೆ ಹೆಸರು ರೋಮಾ ನಾರ್ರಿಸ್. ಯುಕೆ ನಿವಾಸಿ. ಆಕೆಗೆ 40 ವರ್ಷ ವಯಸ್ಸು. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಡಿಯೋ ಹಾಕ್ತಿಲ್ಲ, ರೋಮಾ, ತನ್ನ ಫೋಟೋ ಮಾರಾಟ ಮಾಡಿ ಹಣ ಸಂಪಾದನೆ ಮಾಡ್ತಿಲ್ಲ. ರೋಮಾ ಯಾವುದೇ ಕೆಟ್ಟ ಕೆಲಸವನ್ನು ಕೂಡ ಮಾಡ್ತಾ ಇಲ್ಲ. ದಿನದಲ್ಲಿ ಬರೀ ಆರು ಗಂಟೆ ಕೆಲಸ ಮಾಡುವ ರೋಮಾ, ಕುಟುಂಬಕ್ಕೆ ಸಮಯ ನೀಡ್ತಿದ್ದಾಳೆ.
ವಾಸ್ತವವಾಗಿ ರೋಮಾ, ಪೋಷಕರ ಸಲಹೆಗಾರಳಾಗಿ ಕೆಲಸ ಮಾಡ್ತಿದ್ದಾಳೆ. ಪೋಷಕರಿಗೆ ಆಕೆ ಟ್ರೈನಿಂಗ್ ನೀಡ್ತಾಳೆ. ಕೆಲವೊಮ್ಮೆ ಒಂದು ಗಂಟೆಗೆ 29000 ರೂಪಾಯಿ ಸಂಪಾದನೆ ಮಾಡೋದಿದೆ. ಹೊಸ ಪೋಷಕರಿಗೆ ತಮ್ಮ ಮಗುವನ್ನು ಹೇಗೆ ಮಲಗಿಸಬೇಕು, ಹೇಗೆ ಅವರನ್ನು ನೋಡಿಕೊಳ್ಳಬೇಕು, ಪೌಷ್ಟಿಕ ಆಹಾರ ಏನು ನೀಡಬೇಕು ಎನ್ನುವುದರಿಂದ ಹಿಡಿದು ಸ್ತನಪಾನ ಹೇಗೆ ಮಾಡ್ಬೇಕು ಎಂಬ ಬಗ್ಗೆಯೂ ತರಬೇತಿ ನೀಡ್ತಾಳೆ. ಆನ್ಲೈನ್ ನಲ್ಲಿಯೂ ರೋಮಾ ತರಬೇತಿ ನೀಡೋದಿದೆ.
ವಿಶೇಷವೆಂದ್ರೆ ರೋಮಾ ಯಾವುದೇ ಪದವಿ ಪಡೆದಿಲ್ಲ. ಎರಡು ಬಾರಿ ಡ್ರಾಪ್ಔಟ್. ಎರಡು ಬಾರಿ ಪದವಿ ಪಡೆಯಲು ಪ್ರಯತ್ನ ನಡೆಸಿದಾಗ್ಲೂ ರೋಮಾ ವಿಫಲವಾಗಿದ್ದಾಳೆ. ಆದರೆ ಕಳೆದ ಹದಿನೇಳು ವರ್ಷದಿಂದ ಪೋಷಕರಿಗೆ ಸಲಹೆ ನೀಡಿ ಹಣ ಸಂಪಾದನೆ ಮಾಡ್ತಿದ್ದಾಳೆ.