ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯೊಬ್ಬರಿಗೆ ಮಹಿಳಾ ವೈದ್ಯರೊಬ್ಬರು ಪುನಶ್ಚೇತನ ನೀಡಿ ಜೀವ ಉಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆದ ನಂತರ ವೈದ್ಯೆಯ ಪ್ರಯತ್ನ ಮತ್ತು ತ್ವರಿತ ಪ್ರತಿಕ್ರಿಯೆ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪ್ರಶಂಸೆ ವ್ಯಕ್ತವಾಗಿದೆ.
ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಘಟನೆ ಸಂಭವಿಸಿದ ಸಮಯದಲ್ಲಿ ಮಹಿಳಾ ವೈದ್ಯೆ ನೋಡುಗರ ಗುಂಪಿನ ನಡುವೆ ಅಸ್ವಸ್ಥ ವ್ಯಕ್ತಿಯ ಎದೆಯನ್ನು ಪಂಪ್ ಮಾಡುವುದನ್ನು ಕಾಣಬಹುದು.
ದೃಶ್ಯಗಳ ಪ್ರಕಾರ, ವೈದ್ಯರು ರೋಗಿಯನ್ನು 5 ನಿಮಿಷಗಳಲ್ಲಿ ಪುನರುಜ್ಜೀವನಗೊಳಿಸಿದರು ಮತ್ತು ಅವರು ಪ್ರಜ್ಞೆಯನ್ನು ಮರಳಿ ಪಡೆಯುವವರೆಗೂ ಅವರ ಪ್ರಯತ್ನ ಮುಂದುವರೆಸಿದ್ದಾರೆ. ನಂತರ ವಿಮಾನ ನಿಲ್ದಾಣದ ಅಧಿಕಾರಿಗಳು ವ್ಯಕ್ತಿಗೆ ವೈದ್ಯಕೀಯ ಚಿಕಿತ್ಸೆ ನೀಡಿದ್ದಾರೆ.
ವೈದ್ಯರ ಗುರುತು ಇನ್ನೂ ಪತ್ತೆಯಾಗದಿದ್ದರೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.