ಎಡಭಾಗದ ಕಿಡ್ನಿ ತೆಗೆಯುವ ಬದಲು ಬಲಭಾಗದ ಕಿಡ್ನಿ ತೆಗೆದ ವೈದ್ಯರ ಎಡವಟ್ಟಿನಿಂದ ಮಹಿಳೆಯ ಆರೋಗ್ಯ ಗಂಭೀರವಾಗಿ ಹದಗೆಟ್ಟಿರುವ ಘಟನೆ ರಾಜಸ್ಥಾನದ ಜುಂಜುನುವಿನಲ್ಲಿ ವರದಿಯಾಗಿದೆ. ಖಾಸಗಿ ಆಸ್ಪತ್ರೆಯೊಂದರ ವೈದ್ಯರು, ಹಾನಿಗೊಳಗಾದ ಎಡ ಮೂತ್ರಪಿಂಡದ ಬದಲಿಗೆ ಆಕೆಯ ಆರೋಗ್ಯವಂತ ಬಲ ಭಾಗದ ಕಿಡ್ನಿಯನ್ನು ತೆಗೆದಿದ್ದಾರೆ ಎಂದು ಹೇಳಲಾಗಿದ್ದು, ಬಳಿಕ ಆಕೆ ಗಂಭೀರ ಸ್ಥಿತಿಯಲ್ಲಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿದ ಡಾ. ಸಂಜಯ್ ಧಂಖರ್ ಒಡೆತನದ ಧಂಖರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆದರೆ ವೈದ್ಯರು ಈ ಆರೋಪವನ್ನು ತಳ್ಳಿಹಾಕಿದ್ದು, ಆಪರೇಷನ್ ಸರಿಯಾಗಿ ಮಾಡಿರುವುದಾಗಿ ಹೇಳಿದ್ದಾರೆ.
ನುವಾ ಗ್ರಾಮದ ಈದ್ ಬಾನೊ ಎಂದು ಗುರುತಿಸಲಾದ 30 ವರ್ಷದ ಮಹಿಳೆ ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದರು, ಈ ಕಾರಣದಿಂದಾಗಿ ಅವುಗಳನ್ನು ತೆಗೆಸಲು ಆಸ್ಪತ್ರೆಗೆ ಬಂದಿದ್ದರು. ಕೆಲವು ಪರೀಕ್ಷೆಗಳ ನಂತರ, ಮೂತ್ರಪಿಂಡದ ಕಲ್ಲುಗಳಿಂದಾಗಿ ಆಕೆಯ ಬಲ ಮೂತ್ರಪಿಂಡವು ಹಾನಿಗೊಳಗಾಗಿದೆ ಮತ್ತು ಅದನ್ನು ತುರ್ತಾಗಿ ತೆಗೆದುಹಾಕಬೇಕಾಗಿದೆ ಎಂದು ಡಾ. ಸಂಜಯ್ ಧಂಖರ್ ಮಹಿಳೆಗೆ ತಿಳಿಸಿದರು.
ಮಹಿಳೆಯ ಕುಟುಂಬವು ಸಮ್ಮತಿಸಿ ಮೇ 15 ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ, ಹಾನಿಗೊಳಗಾದ ಎಡ ಮೂತ್ರಪಿಂಡದ ಬದಲಿಗೆ ಡಾ ಧಂಖರ್ ಆರೋಗ್ಯಕರ ಬಲ ಮೂತ್ರಪಿಂಡವನ್ನು ತೆಗೆದುಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಎರಡು ದಿನಗಳ ನಂತರ ಮಹಿಳೆಯ ಆರೋಗ್ಯ ಸ್ಥಿತಿಯು ಹದಗೆಟ್ಟಿತು ಮತ್ತು ಆಕೆಯನ್ನು ಮತ್ತೆ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಡಾ ಧಂಖರ್ ಮಹಿಳೆಯನ್ನು ಜೈಪುರಕ್ಕೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಂತೆ ಸೂಚಿಸಿದರು ಮತ್ತು 15 ರಂದು ತಾವು ನಡೆಸಿದ ಶಸ್ರ್ರಚಿಕಿತ್ಸೆಯ ಬಗ್ಗೆ ಯಾರಿಗೂ ಬಹಿರಂಗಪಡಿಸಬೇಡಿ ಎಂದು ಕೇಳಿಕೊಂಡರು.
ಆಕೆಯನ್ನು ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಿದಾಗ, ಡಾ ಧಂಖರ್ ನಡೆಸಿದ ಎಡವಟ್ಟು ತಿಳಿಯಿತು. ಜೈಪುರದ ವೈದ್ಯರು ಮಹಿಳೆಯನ್ನು ಮನೆಗೆ ಕಳಿಸಿದರು.
ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಾಗ, ಡಾ. ಧಂಖರ್ ಮಹಿಳೆಯ ಕುಟುಂಬಕ್ಕೆ ಭೇಟಿ ನೀಡಿ ಆಕೆಯ ಚಿಕಿತ್ಸೆಗೆ ಹಣ ನೀಡುವುದಾಗಿ ಹೇಳಿದ್ದಾರೆ. ಆದರೆ ಕುಟುಂಬಸ್ಥರು ಈ ಪ್ರಸ್ತಾಪವನ್ನು ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದು, ಧಂಖರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಮಹಿಳೆಯ ಪತಿ ಶಬ್ಬೀರ್ ತಿಳಿಸಿದ್ದಾರೆ.
ಏತನ್ಮಧ್ಯೆ, ವೈದ್ಯರು ಆರೋಪವನ್ನು ನಿರಾಕರಿಸಿ ಆಕೆಯ ಬಲ ಮೂತ್ರಪಿಂಡಕ್ಕೆ ಹಾನಿಯಾಗಿತ್ತು, ಹೀಗಾಗಿ ಅದನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆಸಲಾಯಿತು ತಮ್ಮದೇನೂ ತಪ್ಪಿಲ್ಲ ಎಂದು ಆರೋಪ ನಿರಾಕರಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ರಾಜಕುಮಾರ್ ಡಾಂಗಿ ಘಟನೆಯ ತನಿಖೆಗಾಗಿ ಐದು ವೈದ್ಯರ ತಂಡವನ್ನು ರಚಿಸಿದರು. ಆಸ್ಪತ್ರೆ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದ್ದು ನೋಂದಣಿ ರದ್ದುಮಾಡಲಾಗಿದೆ ಎಂದು ತಿಳಿಸಿದರು.