ರಾಜಸ್ಥಾನದ ಬಾಲಕಿಯೊಬ್ಬಳು ರಸ್ತೆಯ ಮೇಲೆ ಕ್ರಿಕೆಟ್ ಆಟವಾಡುತ್ತಿದ್ದ ವಿಡಿಯೋ ಒಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ. ಏಕೆಂದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಆಟಗಾರ್ತಿಯು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ನೋಡುಗರನ್ನು ಬೆಚ್ಚಿ ಬೀಳಿಸಿದ್ದಾಳೆ.
ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದರು. ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಆಟವನ್ನು ನೆನಪಿಸಿಕೊಳ್ಳುವಂತೆ ಈಕೆಯ ಆಟದ ಪರಿಯಿದೆ. ಇಂಥ ಪ್ರತಿಭೆಗಳಿಗೆ ಉತ್ತೇಜನ ನೀಡಬೇಕು ಮತ್ತು ಉತ್ತಮ ತರಬೇತಿ ನೀಡಬೇಕು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರ ಗಮನ ಸೆಳೆದಿದ್ದರು.
ಇದೀಗ ಈ ಬಾಲಕಿಯ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಿದೆ. ಈಕೆಯ ಹೆಸರು ಮುಮಲ್ ಮೆಹರ್. ಈಕೆ ರಾಜಸ್ಥಾನದ ಬಾರ್ಮರ್‌ನ ಕನಾಸರ್ ಗ್ರಾಮದ 15 ವರ್ಷದ ಬಾಲಕಿ. ಇಲ್ಲಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 8ನೇ ತರಗತಿ ಕಲಿಯುತ್ತಿದ್ದಾಳೆ.
ಮುಮಲ್ ಬ್ಯಾಟಿಂಗ್ ಕೌಶಲ್ಯವನ್ನು ಹೊಂದಿರುವ ಜೊತೆಗೆ ಪ್ರಚಂಡ ಬೌಲರ್. ಆಕೆ ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾಳೆ ಎಂದು ಮುಮಲ್ ಮೆಹರ್ ಅವರ ಸಹೋದರ ಅಬ್ದುಲ್ ರಜಾಕ್ ತಿಳಿಸಿದ್ದಾರೆ. ಬಾಲಕಿಯ ತಂದೆ ರೈತರಾಗಿದ್ದು, ಕುಟುಂಬದ ಆರ್ಥಿಕ ಸ್ಥಿತಿಯಿಂದಾಗಿ ಕೋಚಿಂಗ್ ಅಕಾಡೆಮಿಗೆ ಕಳುಹಿಸಲಾಗಲಿಲ್ಲ ಎಂದು ತಿಳಿದುಬಂದಿದೆ.