ನವೆಂಬರ್ 26, 2008, ಮುಂಬೈನ ಐಕಾನಿಕ್ ತಾಜ್ ಹೋಟೆಲ್ ಎಂದಿನಂತೆ ಸಾಮಾನ್ಯ ದಿನವಾಗಿ ಆರಂಭವಾಗಿತ್ತು. ಆದರೆ ಸಂಜೆಯಾಗುತ್ತಿದ್ದಂತೆ ಒಳಗಿನಿಂದ ಗುಂಡಿನ ಸದ್ದು ಏಕಾಏಕಿ ಪ್ರತಿಧ್ವನಿಸಲಾರಂಭಿಸಿತ್ತು. ಎಕೆ-47 ರೈಫಲ್‌ಗಳು ಮತ್ತು ಗ್ರೆನೇಡ್ ಹೊಂದಿದ್ದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಹೋಟೆಲ್‌ಗೆ ನುಸುಳಿದ್ದರು. ಈ ಸಂದರ್ಭದಲ್ಲಿ ಟಾಟಾ ಗ್ರೂಪ್ ಅಧ್ಯಕ್ಷರಾಗಿದ್ದ ರತನ್ ಟಾಟಾ ಅಂದು ತಮ್ಮ ಕೆಲಸ ಕಾರ್ಯ ಮುಗಿಸಿ ಮನೆಗೆ ಮರಳಿದ್ದರು.
ರಾತ್ರಿ 9:35 ಕ್ಕೆ ರತನ್ ಟಾಟಾ ಅವರ ಫೋನ್ ಅನಿರೀಕ್ಷಿತವಾಗಿ ರಿಂಗಣಿಸಿತ್ತು. ಟಾಟಾ ಸನ್ಸ್‌ನ ಮಾಜಿ ಉಪಾಧ್ಯಕ್ಷ ನೋಶಿರ್ ಸೂನಾವಾಲಾ ಅವರಿಂದ ಕರೆ ಬಂದಿದ್ದು, ಅವರು ತಡರಾತ್ರಿಯಲ್ಲಿ ಅಪರೂಪವಾಗಿ ಕರೆ ಮಾಡುವ ವಿಶ್ವಾಸಾರ್ಹ ಸಹೋದ್ಯೋಗಿ. ತಮ್ಮ ಫೋನ್‌ನಲ್ಲಿ ಸೂನಾವಾಲಾ ಅವರ ಹೆಸರು ನೋಡಿ, ಟಾಟಾ ಆಶ್ಚರ್ಯಚಕಿತರಾಗಿದ್ದರು. ಈ ಕರೆಗೆ ಉತ್ತರಿಸುವ ಮುನ್ನವೇ, ಸೂನಾವಾಲಾ ಆತಂಕದ ಧ್ವನಿಯಲ್ಲಿ “ತಾಜ್‌ನಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ ? ಈಗ ಗುಂಡಿನ ಸದ್ದು ಕೇಳುತ್ತಿದೆ……” ಎಂದಿದ್ದರು.
ತಾಜ್ ಹೋಟೆಲ್ ಮೇಲಿನ ದಾಳಿಯ ಸುದ್ದಿ ತಿಳಿದಾಗ, ರತನ್ ಟಾಟಾ ತಕ್ಷಣವೇ ಸ್ಥಳಕ್ಕೆ ಧಾವಿಸಿದರಾದರೂ ಅವರ ಸ್ಥಾನದ ಹೊರತಾಗಿಯೂ ಅವರು ಒಳ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಥಾಮಸ್ ಮ್ಯಾಥ್ಯೂ ಬರೆದಿರುವ ರತನ್ ಟಾಟಾ ಕುರಿತಾದ ಜೀವನಚರಿತ್ರೆ ʼರತನ್ ಟಾಟಾ: ಎ ಲೈಫ್ʼ ಈ ಎಲ್ಲ ಕಥನವನ್ನು ಬಿಚ್ಚಿಟ್ಟಿದೆ.
ಮ್ಯಾಥ್ಯೂ ಪ್ರಕಾರ, ಸೂನಾವಾಲಾ ಆ ಸಮಯದಲ್ಲಿ ಹೋಟೆಲ್‌ನಲ್ಲಿದ್ದ ಮಗನ ಸ್ನೇಹಿತನಿಂದ ಭಯೋತ್ಪಾದಕ ದಾಳಿಯ ಬಗ್ಗೆ ತಿಳಿದುಕೊಂಡಿದ್ದರು. ಅವರ ಸ್ನೇಹಿತ ತನ್ನ ಮಗನ ಸುರಕ್ಷತೆಗಾಗಿ ಸಹಾಯ ಕೋರಿ ಸೂನಾವಾಲಾಗೆ ತುರ್ತಾಗಿ ಕರೆ ಮಾಡಿದ್ದು, ಮೊದಮೊದಲು ಟಾಟಾಗೆ ಇಂಥದ್ದೊಂದು ಕಾರ್ಯ ನಡೆದಿದೆ ಎಂದರೆ ನಂಬಲಾಗಿರಲಿಲ್ಲ. ಬಳಿಕ ಅವರು ತಕ್ಷಣವೇ ಹೋಟೆಲ್‌ನ 24 ಗಂಟೆಗಳ ಸೇವಾ ಲೈನ್‌ಗೆ ಕರೆ ಮಾಡಿದ್ದು, ಯಾರೂ ಉತ್ತರಿಸದಿದ್ದಾಗ ಏನೋ ಗಂಭೀರವಾದ ಘಟನೆ ನಡೆದಿದೆ ಎಂಬುದನ್ನು ಅರಿತುಕೊಂಡರು.
ಏತನ್ಮಧ್ಯೆ, ಟಾಟಾ ಗ್ರೂಪ್ ನಿರ್ದೇಶಕ ಆರ್.ಕೆ. ಕೃಷ್ಣಕುಮಾರ್, ಇಂಡಿಯನ್ ಹೋಟೆಲ್‌ಗಳ ವ್ಯವಸ್ಥಾಪಕ ನಿರ್ದೇಶಕ ರೇಮಂಡ್ ಬಿಕ್ಸನ್ ಅವರಿಂದ ಕರೆ ಸ್ವೀಕರಿಸಿದಾಗ ಮನೆಗೆ ಮರಳಿದ್ದರು. ತನ್ನ ಪತ್ನಿ ಬ್ಯಾಂಕರ್ ಸ್ನೇಹಿತನೊಂದಿಗೆ ತಾಜ್‌ನಲ್ಲಿ ಊಟ ಮಾಡುತ್ತಿದ್ದ ಕುರಿತು ಬಿಕ್ಸನ್, ದಾಳಿಯ ಬಗ್ಗೆ ಕೃಷ್ಣ ಕುಮಾರ್‌ಗೆ ಮಾಹಿತಿ ನೀಡಿದ್ದರು. ಆಗ ಯಾವುದೇ ಹಿಂಜರಿಕೆಯಿಲ್ಲದೆ, ಕೃಷ್ಣ ಕುಮಾರ್ ಹೋಟೆಲ್‌ಗೆ ಧಾವಿಸಿದ್ದರು.
ಈ ವೇಳೆಗೆ ರತನ್ ಟಾಟಾ ಕೂಡ ತಾಜ್‌ಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರು ಕೃಷ್ಣ ಕುಮಾರ್ ಅವರಿಂದ ಕರೆ ಸ್ವೀಕರಿಸಿದ್ದು, ಅವರು ಪರಿಸ್ಥಿತಿಯ ತೀವ್ರತೆಯನ್ನು ವಿವರಿಸಿದ್ದರು. ಟಾಟಾ 10:45 PM ರ ಸುಮಾರಿಗೆ ಹೋಟೆಲ್ ತಲುಪಿದ್ದು, ಅವರು ಒಳಗೆ ಹೋಗಲು ಪ್ರಯತ್ನಿಸಿದರೂ ಪೊಲೀಸರು ಅವರನ್ನು ತಡೆದರು.
ಅವರು ಒಳಗೆ ಹೋಗಿ ಏನಾದರೂ ಸಂಭವಿಸಿದರೆ ಅಥವಾ ಭಯೋತ್ಪಾದಕರು ರತನ್ ಟಾಟಾ ಅವರನ್ನು ಒತ್ತೆಯಾಳಾಗಿ ತೆಗೆದುಕೊಂಡರೆ ಪರಿಸ್ಥಿತಿ ಇನ್ನಷ್ಟು ಅಪಾಯಕಾರಿಯಾಗಬಹುದು ಎಂದು ಸ್ಥಳದಲ್ಲಿದ್ದ ಮುಂಬೈ ಪೊಲೀಸರು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಅಧಿಕಾರಿಗಳು ವಿವರಿಸಿದ್ದರು.