ತೂಕ ಹೆಚ್ಚಳ ಅನೇಕರನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಸ್ಲಿಮ್ ಮತ್ತು ಟ್ರಿಮ್ ಆಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಇದೇ ಕಾರಣಕ್ಕೆ ಜನರು ಬಗೆಬಗೆಯ ಡಯಟ್ ಮೊರೆಹೋಗುತ್ತಾರೆ, ಕಳೆದ ಕೆಲವು ವರ್ಷಗಳಲ್ಲಿ, ಕಡಿಮೆ ಅವಧಿಯಲ್ಲಿ ತ್ವರಿತವಾಗಿ ತೂಕವನ್ನು ಕಳೆದುಕೊಳ್ಳುವ ʼಕ್ರಾಶ್ ಡಯಟ್ʼ ಗಳ ಕ್ರೇಜ್ ಹೆಚ್ಚಾಗಿದೆ.
ನಟಿ ಶ್ರೀದೇವಿ ಅವರ ಸಾವಿಗೆ ಕೂಡ ಈ ʼಕ್ರಾಶ್ ಡಯಟ್ʼ ಕಾರಣವಾಯಿತು ಅಂತಾ ಹೇಳಲಾಗ್ತಿದೆ. ಶ್ರೀದೇವಿ ಸಾವಿನ 5 ವರ್ಷಗಳ ನಂತರ ಪತಿ ಬೋನಿ ಕಪೂರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಶ್ರೀದೇವಿ ʼಕ್ರಾಶ್ ಡಯಟ್ʼ ಮೂಲಕ ತಮ್ಮ ತೂಕವನ್ನು ನಿಯಂತ್ರಿಸುತ್ತಿದ್ದರು ಅಂತಾ ಬೋನಿ ಕಪೂರ್ ಹೇಳಿದ್ದಾರೆ. ʼಕ್ರಾಶ್ ಡಯಟ್ʼ ಎಂದರೇನು ? ಅದರಿಂದಾಗುವ ತೊಂದರೆಗಳೇನು ಎಂಬುದನ್ನು ನೋಡೋಣ.
ʼಕ್ರಾಶ್ ಡಯಟ್ʼ ಎಂದರೇನು?
ಕ್ಷಿಪ್ರವಾಗಿ ತೂಕ ಇಳಿಸಿಕೊಳ್ಳಲು ಕ್ರ್ಯಾಶ್ ಡಯಟ್‌ಗಳನ್ನು ಅನುಸರಿಸಲಾಗುತ್ತಿದೆ. ಇದು ಆಹಾರಕ್ರಮದ ಪ್ರಕ್ರಿಯೆಯಾಗಿದ್ದು, ಈ ಡಯಟ್ ಮಾಡುವವರು ಕಡಿಮೆ ಕ್ಯಾಲೊರಿಗಳನ್ನು ತಿನ್ನುವ ಮೂಲಕ ತೂಕವನ್ನು ಕಳೆದುಕೊಳ್ಳುತ್ತಾರೆ.
ಉದಾಹರಣೆಗೆ ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ ಸುಮಾರು 2500 ಕ್ಯಾಲೋರಿಗಳು ಬೇಕಾಗುತ್ತವೆ. ಆದರೆ ಕ್ರ್ಯಾಶ್ ಡಯಟ್ ಮಾಡುವ ವ್ಯಕ್ತಿಯು ದಿನಕ್ಕೆ 700 ರಿಂದ 900 ಕ್ಯಾಲೊರಿಗಳನ್ನು ಮಾತ್ರ ಸೇವಿಸುತ್ತಾರೆ. ಕ್ರ್ಯಾಶ್ ಡಯಟ್ ಮಾಡುವುದರಿಂದ ಒಂದು ವಾರದಲ್ಲಿ ಮೂರು ಕೆಜಿಯಷ್ಟು ತೂಕವನ್ನು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ.
ಕ್ರ್ಯಾಶ್ ಡಯಟ್‌ನಲ್ಲಿ ಕೆಲವರು ಉಪ್ಪನ್ನು ತಿನ್ನುವುದಿಲ್ಲ. ಇದರ ಹೊರತಾಗಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಒಂದೇ ವಾರದಲ್ಲಿ ಸಾಕಷ್ಟು ತೂಕ ಕಡಿಮೆಯಾಗುತ್ತದೆ.
ಕ್ರ್ಯಾಶ್ ಆಹಾರದ ಅಪಾಯಗಳು…!
ಕ್ರ್ಯಾಶ್ ಡಯಟ್ ಅನ್ನು ಸಾಮಾನ್ಯವಾಗಿ ಲೈಮ್‌ಲೈಟ್‌ನಲ್ಲಿರುವವರು, ಸೆಲೆಬ್ರಿಟಿಗಳು ಅನುಸರಿಸುತ್ತಾರೆ. ಕ್ರ್ಯಾಶ್ ಡಯಟ್‌ನಲ್ಲಿ ದೇಹವು ತುಂಬಾ ಕಡಿಮೆ ಪೋಷಣೆಯನ್ನು ಪಡೆಯುವುದರಿಂದ ಅನೇಕ ಅಪಾಯಗಳಿವೆ. ಮೊದಲೇ ಯಾವುದಾದರೂ ಕಾಯಿಲೆ ಇದ್ದಲ್ಲಿ ಕ್ರ್ಯಾಶ್ ಡಯಟ್ ಮಾರಕವಾಗಬಹುದು.
ಬಿಪಿ ಸಮಸ್ಯೆ ಇರುವವರಿಗೆ ಕ್ರ್ಯಾಶ್ ಡಯಟ್ ಅಪಾಯಕಾರಿ. ಯಾರಾದರೂ ದೀರ್ಘಕಾಲದಿಂದ ಕ್ರ್ಯಾಶ್ ಡಯಟ್ ಮಾಡುತ್ತಿದ್ದರೆ ಅವರು ಖಿನ್ನತೆ, ಆತಂಕ, ಸ್ನಾಯುಗಳ ನಷ್ಟ, ದುರ್ಬಲ ಮೂಳೆಗಳು, ಕೂದಲು ಉದುರುವಿಕೆ, ಮಧುಮೇಹ, ನಿದ್ರೆಯ ತೊಂದರೆಗಳು ಹೀಗೆ ಅನೇಕ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಇದರ ಜೊತೆಗೆ ದೌರ್ಬಲ್ಯ, ಡಿಹೈಡ್ರೇಶನ್ ಮತ್ತು ರಕ್ತಹೀನತೆ ಉಂಟಾಗುವ ಸಾಧ್ಯತೆಯೂ ಇರುತ್ತದೆ.