ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಬಹುದು. ಅದು ಸಾಮಾನ್ಯ ಸಂಗತಿ ಎನಿಸುತ್ತದೆ. ಆದರೆ ತಮ್ಮ ಕುಟುಂಬ ಸದಸ್ಯರು ಕೆಲಸ ಮಾಡುವ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಸಿಗುವುದು ಅಪರೂಪ.
ಇಂತಹ ಅವಕಾಶ ಸಿಗುವುದು ಅಸಾಮಾನ್ಯವೇನಲ್ಲ ಎನಿಸಿದರೂ ಅತ್ಯಂತ ಸಂತಸದ ಕ್ಷಣವಾಗಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಗ ಪೈಲಟ್ ಆಗಿದ್ದ ವಿಮಾನದಲ್ಲಿ ತಾಯಿಯು ಪ್ರಯಾಣ ಮಾಡಲು ವಿಮಾನ ಹತ್ತಿ ಬಂದಾಗ ಮಗ ನೀಡುವ ಸರ್ಪ್ರೈಸ್ ನೆಟ್ಟಿಗರ ಹೃದಯ ಮುಟ್ಟಿದೆ.
ಪೈಲಟ್ ವಿಮಲ್ ಶಶಿಧರನ್ ಈ ಮನಮುಟ್ಟುವ ಕ್ಷಣವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಫ್ಲೈಟ್ ಅಟೆಂಡೆಂಟ್‌ಗಳು ಸ್ವಾಗತಿಸುತ್ತಿದ್ದು ಮಹಿಳೆ ತನ್ನ ಸೀಟಿನ ಕಡೆಗೆ ಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ತನ್ನ ಮಗ ಈ ವಿಮಾನದ ಪೈಲಟ್ ಆಗಿರುತ್ತಾನೆ ಎಂದು ಆಕೆಗೆ ತಿಳಿದಿರುವುದಿಲ್ಲ. ಆದರೆ ಕೆಲವೇ ಕ್ಷಣಗಳಲ್ಲಿ ಪೈಲಟ್ ಶಶಿಧರನ್ ಇದ್ದಕ್ಕಿದ್ದಂತೆ ತನ್ನ ತಾಯಿಯನ್ನು ಹಿಂದಿನಿಂದ ಕರೆಯುತ್ತಾರೆ. ಹಿಂದೆ ತಿರುಗಿ ನೋಡಿದ ತಾಯಿ ಮಗನನ್ನು ಪೈಲಟ್ ರೂಪದಲ್ಲಿ ನೋಡಿ ಸಂತಸ ಪಡುತ್ತಾರೆ. ಈ ಭಾವನಾತ್ಮಕ ಕ್ಷಣದಲ್ಲಿ ಇಬ್ಬರೂ ಪರಸ್ಪರ ತಬ್ಬಿಕೊಳ್ಳುತ್ತಾರೆ.
“ವಿಮಾನದಲ್ಲಿ ಆಶ್ಚರ್ಯಕರವಾಗಿ ನನ್ನ ತಾಯಿಯನ್ನು ಭೇಟಿಯಾದೆ. ಅವಳ ಕಣ್ಣಂಚಿನಲ್ಲಿದ್ದ ಕಣ್ಣೀರು ಎಲ್ಲವನ್ನೂ ಹೇಳಿತು. ಅಂತಹ ಕ್ಷಣಗಳು ಜೀವನವನ್ನು ಅಸಾಮಾನ್ಯವಾಗಿಸುತ್ತದೆ. ” ಎಂದು ವಿಮಲ್ ಶಶಿಧರನ್ ವಿಡಿಯೋಗೆ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಈ ಅಪೂರ್ವ ಕ್ಷಣವನ್ನು ಕೊಂಡಾಡಿದ್ದಾರೆ.