ಅಪಘಾನಿಸ್ತಾನದ ಹಿಂದೂಕುಷ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ 6.5 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಪಾಕಿಸ್ತಾನ ಹಾಗೂ ಉತ್ತರ ಭಾರತದ ಅನೇಕ ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಗಾಬರಿಗೊಂಡ ಜನರ ತಂತಮ್ಮ ಮನೆಗಳು, ಕಟ್ಟಡಗಳಿಂದ ಹೊರಗೋಡಿ ಬರುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ಪಾಕಿಸ್ತಾನದ ಪೇಶಾವರದಲ್ಲಿರುವ ಸುದ್ದಿವಾಹಿನಿಯ ಸ್ಟುಡಿಯೋವೊಂದರಲ್ಲಿ ಸಹ ಕಂಪನದ ಅನುಭವವಾಗಿರುವ ವಿಡಿಯೋ ಕ್ಲಿಪ್ ಇದೀಗ ವೈರಲ್ ಆಗಿದೆ. ಭೂಕಂಪನದ ಅನುಭವವಾದರೂ ಸಹ ತಣ್ಣಗೆ ತನ್ನ ಪಾಡಿಗೆ ತಾನು ಸುದ್ದಿ ಓದುತ್ತಿರುವ ನಿರೂಪಕನನ್ನು 31 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ನೋಡಬಹುದಾಗಿದೆ.
ಪಾಕಿಸ್ತಾನದ ಅಧಿಕೃತ ಹವಾಮಾನ ಕೇಂದ್ರ ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, “ಪಾಕಿಸ್ತಾನದ ಸ್ಥಳೀಯ ಮಹ್‌ಶ್ರಿಕ್ ಟಿವಿ ಭೂಕಂಪನದ ವೇಳೆ. ಇಡೀ ಸ್ಟುಡಿಯೋ ಆ ವೇಳೆಯಲ್ಲಿ ಅಲುಗಾಡುತ್ತಿತ್ತು. ಸುದ್ದಿ ನಿರೂಪಕ ಭೂಕಂಪನದ ವರದಿಯನ್ನು ಲೈವ್ ಕ್ಯಾಮೆರಾದಲ್ಲಿ ಕೊಟ್ಟಿದ್ದಾರೆ,” ಎಂದು ತಿಳಿಸಿದೆ.
ಶಾಹ್ ಫೈಸಲ್ ಹೆಸರಿನ ಈ ಸುದ್ದಿ ನಿರೂಪಕನ ಧೈರ್ಯವನ್ನು ಮೆಚ್ಚಿದ ಪಾಕಿಸ್ತಾನ್ ವೆದರ್, “ನಮ್ಮ ಹೀರೋ ಶಾಹ್ ಫೈಸಲ್ ಹಾಗೂ ಮಹ್‌ಶ್ರಿಕ್ ಟಿವಿ ತಂಡ ಸುರಕ್ಷಿತವಾಗಿರಿ,” ಎಂದಿದೆ.
ಅಫಘಾನಿಸ್ತಾನದ ಜುರ್ಮ್ ಪಟ್ಟಣದಲ್ಲಿ ಭೂಕಂಪನದ ಕೇಂದ್ರವಿದ್ದು, ಪಾಕಿಸ್ತಾನದಲ್ಲಿ ಒಂಬತ್ತು ಮಂದಿ ಬಲಿ ಪಡೆದು 160 ಮಂದಿಗೆ ಗಾಯಗೊಳಿಸಿದೆ. ಭೂಕಂಪನದ ವ್ಯಾಪ್ತಿಯು 180 ಕಿಮೀವರೆಗೂ ಇತ್ತು ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ತಿಳಿಸಿದೆ.
ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಭೂಕಂಪನದ ಅನುಭವವಾಗಿದೆ. ಇಂಡಿಯನ್ ಭೂಪದರವು ಯುರೇಷ್ಯನ್ ಭೂಪದರವನ್ನು ಮೇಲ್ಮುಖವಾಗಿ ತಳ್ಳುತ್ತಿರುವ ಕಾರಣ ದಕ್ಷಿಣ ಏಷ್ಯಾ ಪ್ರದೇಶ ಭೂಕಂಪದ ಸಾಧ್ಯತೆ ಹೆಚ್ಚಿರುವ ಪ್ರದೇಶವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.