
ಮುಂಬೈ ಹಾಗೂ ನವಿ ಮುಂಬೈ ಬೀದಿಗಳನ್ನು ಸುಂದರೀಕರಣಗೊಳಿಸುವ ಯೋಜನೆಗಳಿಗೆ ಅಲ್ಲಿನ ಪಾಲಿಕೆಗಳು ಮುಂದಾಗಿವೆ. ಈ ಯೋಜನೆಯಡಿ ಫ್ಲೈಓವರ್‌ಗಳ ಕೆಳಗೆ ಸಾರ್ವಜನಿಕ ಕ್ರೀಡಾ ಸಮುಚ್ಛಯಗಳ ನಿರ್ಮಾಣವೂ ಒಂದಾಗಿದೆ.
ಇಂಥ ಒಂದು ಕ್ರೀಡಾ ಸಮುಚ್ಛಯವೊಂದನ್ನು ಸಾನ್ಪಾಡಾ ಫ್ಲೈಓವರ್ ಕೆಳಗೆ ನಿರ್ಮಿಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಬ್ಯಾಸ್ಕೆಟ್ ಬಾಲ್ ಕೋರ್ಟ್‌ನಂತೆ ಕಾಣುವ ಜಾಗದಲ್ಲಿ ಯುವಕರು ಕ್ರಿಕೆಟ್ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಪರೀತ ನಗರೀಕರಣದಿಂದ ದೇಶದ ನಗರಗಳು ಇಕ್ಕಟ್ಟಾಗುತ್ತಿರುವ ಕಾರಣ ಸಾರ್ವಜನಿಕರಿಗೆ ವಾಯು ವಿಹಾರ ಹಾಗೂ ದೈಹಿಕ ಚಟುವಟಿಕೆಗಳಿಗೆ ಜಾಗವೇ ಇಲ್ಲವೆಂಬಂತಾಗಿದೆ. ಹೀಗಾಗಿ ಮುಂಬೈ ಹಾಗೂ ನವಿ ಮುಂಬೈ ಪಾಲಿಕೆಗಳು ಇಂಥ ಆವಿಷ್ಕಾರೀ ಪ್ರಯೋಗಗಳನ್ನು ಮಾಡುತ್ತಿವೆ.
ಉದ್ಯಮಿ ಆನಂದ್ ಮಹಿಂದ್ರಾರ ಮೆಚ್ಚುಗೆಗೆ ಪಾತ್ರವಾಗಿರುವ ಈ ವಿಡಿಯೋದಲ್ಲಿರುವಂತೆ ಬೆಂಗಳೂರಿನಲ್ಲೂ ಸಹ ಮಾಡಬೇಕೆಂದು ನೆಟ್ಟಿಗರು ಕಾಮೆಂಟ್‌ಗಳಲ್ಲಿ ಹೇಳಿಕೊಂಡಿದ್ದಾರೆ.