ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಡಿ. ಹನುಮಂತಯ್ಯ ನೀಡಿರುವ ಹೇಳಿಕೆಗೆ ಸಂಘದ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಅಧ್ಯಕ್ಷರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಜಯಮುತ್ತು ಪ್ರಕಟಣೆ ನೀಡಿ, ಒಕ್ಕಲಿಗರ ಸಂಘದ ಅಭಿವೃದ್ಧಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸೇರಿದಂತೆ ಸಮುದಾಯದ ಹಲವು ನಾಯಕರು, ಗಣ್ಯರು ಅಪಾರ ಕೊಡುಗೆ ನೀಡುತ್ತಾ ಬಂದಿದ್ದಾರೆ. ಹಿಂದಿನಿಂದಲೂ ಆದಿಚುಂಚನಗಿರಿ ಮಠದ ಸ್ವಾಮೀಜಿ ಮತ್ತು ಇತರೆ ಮಠಾಧೀಶರು ಸಂಘಕ್ಕೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನ ಮಾಡುತ್ತಿದ್ದಾರೆ. ಕಾಲ ಕಾಲಕ್ಕೆ ಅಧಿಕಾರಕ್ಕೆ ಬರುವ ಸರ್ಕಾರಗಳು ಪಕ್ಷಾತೀತವಾಗಿ ಸಹಾಯ ಮಾಡುತ್ತಿವೆ. ಹಾಗಾಗಿ ಸಂಘದ ಸರ್ವ ಸದಸ್ಯರು ತಮಗೆ ಇಷ್ಟ ಬಂದವರನ್ನು ಆಯ್ಕೆ ಮಾಡುವ ಅಧಿಕಾರ ಪ್ರಜಾಪ್ರಭುತ್ವದಲ್ಲಿ ಇದೆ ಎಂದು ತಿಳಿಸಿದ್ದಾರೆ.
ಆಡಳಿತ ಮಂಡಳಿಯ ನಿರ್ದೇಶಕರು ಕೂಡ ಆಯಾ ಜಿಲ್ಲೆಗಳಲ್ಲಿ ವಿವಿಧ ಪಕ್ಷಗಳಲ್ಲಿ ಸ್ಥಳೀಯವಾಗಿ ಗುರುತಿಸಿಕೊಂಡು ಜನ ಸೇವೆ ಮಾಡುತ್ತಿದ್ದಾರೆ. ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ನಂತರ ಪಕ್ಷಾತೀತವಾಗಿ ಸಂಘದ ಒಳಿತಿಗೆ ಶ್ರಮಿಸುತ್ತಿದ್ದಾರೆ. ರಾಜ್ಯ ಒಕ್ಕಲಿಗರ ಸಂಘವು ನಿರ್ದಿಷ್ಟವಾಗಿ ಯಾವುದೇ ವ್ಯಕ್ತಿ ಅಥವಾ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ.
ಸಂಘವು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದೆ ಎಂಬುದು ಡಿ. ಹನುಮಂತಯ್ಯ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಅಧ್ಯಕ್ಷರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.