ಕೈಯಲ್ಲಿ ಮೊಬೈಲ್ ಹಿಡಿದು ಒಮ್ಮೆ ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು. ಸಾಲು ಸಾಲು ವೈರಲ್ ಆಗಿರುವ ವಿಡಿಯೋಗಳು ಒಂದೊಂದಾಗಿ ಪ್ಲೇ ಆಗ್ತಾನೇ ಹೋಗುತ್ತೆ. ಅದೇ ರಾಶಿ ರಾಶಿ ವಿಡಿಯೋಗಳಲ್ಲಿ ಈ ಒಂದು ವಿಡಿಯೋ ನೋಡಿ ನೆಟ್ಟಿಗರು ದಂಗಾಗಿ ಹೋಗಿದ್ದಾರೆ.
ಈ ವಿಡಿಯೋದಲ್ಲಿ ಕಾರ್ಮಿಕನೊಬ್ಬ ಸೈಕಲ್ ಓಡಿಸುತ್ತಿದ್ದಾನೆ. ಇಷ್ಟೆ ಆಗಿದ್ದರೆ ಇದು ಕಾಮನ್ ವಿಡಿಯೋ ಆಗಿರೋದು. ಆದರೆ ಈ ಕಾರ್ಮಿಕ ತಲೆಯ ಮೇಲೆ ಹಲಗೆಗಳನ್ನ ಇಟ್ಕೊಂಡು, ಬ್ಯಾಲೆನ್ಸ್ ಮಾಡ್ಕೊಂಡು ಸೈಕಲ್ ಓಡಿಸುತ್ತಿದ್ದಾನೆ. ಅಷ್ಟೆ ಅಲ್ಲ ಆತ ಎರಡೂ ಕೈ ಬಿಟ್ಟು ಸೈಕಲ್ ಓಡಿಸುತ್ತಿದ್ದಿದ್ದು, ಜನ ಇದು ಹೇಗೆ ಸಾಧ್ಯ ಅಂತ ಅಂದುಕೊಳ್ಳುತ್ತಿದ್ದಾರೆ.
ಈಗ ಈ ಕಾರ್ಮಿಕ ತಲೆಮೇಲೆ ಹಲಗೆ ಇಟ್ಕೊಂಡು, ಕೈಯನ್ನ ಬಿಟ್ಟು ಸೈಕಲ್ ಓಡಿಸ್ತಿರುವ ವಿಡಿಯೋವನ್ನ ಐಪಿಎಸ್ ಅಧಿಕಾರಿ ಆರಿಫ್ ಶೇಖ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡ್ಕೊಂಡಿದ್ದಾರೆ. ಅದು ಜನನಿಬಿಡ ರಸ್ತೆ, ಪಾದಚಾರಿಗಳು ಮತ್ತು ಕಾರುಗಳು ಎರಡೂ ದಿಕ್ಕುಗಳಲ್ಲಿ ಇರುವುದನ್ನ ಗಮನಿಸಬಹುದು.
ಆದರೂ ಆತ ಕೊಂಚವೂ ಭಯವೇ ಇಲ್ಲದೇ ತನ್ನ ಕೆಲಸವನ್ನ ನೆಮ್ಮದಿಯಾಗಿ ಮಾಡುವುದನ್ನ ಇಲ್ಲಿ ನೋಡಬಹುದು. ಈ ವಿಡಿಯೋ ಶೀರ್ಷಿಕೆಯಲ್ಲಿ ” ಜೀವನದಲ್ಲಿ ಬೇರೆ ಏನಾದರೂ ಸಿಗುತ್ತೋ ಬಿಡುತ್ತೋ ಇಷ್ಟು ಆತ್ಮವಿಶ್ವಾಸವಂತೂ ಸಿಕ್ಕರೆ ಸಾಕು.” ಎಂದು ಬರೆದಿದ್ದಾರೆ.
ಈ ವಿಡಿಯೋ ನೋಡಿ ನೆಟ್ಟಿಗರು, ಆ ಕಾರ್ಮಿಕನ ಕಾರ್ಯಕ್ಷಮತೆ ನೋಡಿ ಮೆಚ್ಚಿದ್ದಾರೆ. ಒಬ್ಬರು ”ಒಂದು ಕಷ್ಟಕರ ಮಾರ್ಗವನ್ನ ಹೇಗೆ ಸುಲಭವಾಗಿ ಮಾಡಿಕೊಳ್ಳಬಹುದು ಅನ್ನೋದನ್ನ ಈ ವಿಡಿಯೋ ನೋಡಿ ಕಲಿಯಬೇಕು” ಇನ್ನೊಬ್ಬರು ಈ ವಿಡಿಯೋಗೆ ಆತ ಬ್ರೇಕ್ ಬಳಸಿದರೆ ಹೇಗೆ ಬಳಸುತ್ತಾನೆ ಅನ್ನೊದನ್ನ ನೋಡುವುದಕ್ಕೆ ತಾನು ಉತ್ಸುಕನಾಗಿದ್ದೇನೆ” ಎಂದು ಬರೆದಿದ್ದಾರೆ. ಮತ್ತೊಬ್ಬರು ದಿನದ ಎರಡು ಹೊತ್ತಿನ ಊಟಕ್ಕಾಗಿ ಜೀವನವೇ ಸರ್ಕಸ್ನಂತಾಗಿದೆ ಎಂದು ತಮ್ಮ ಕಾಮೆಂಟ್ ಮಾಡಿದ್ದಾರೆ.