ಪೊಲೀಸರು, ಅದರಲ್ಲಿಯೂ ಟ್ರಾಫಿಕ್ ಪೊಲೀಸರ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದು ಜನಸಾಮಾನ್ಯರಿಗೆ ಕಡಿಮೆ. ಆದರೆ ಇಲ್ಲೋರ್ವ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಇರುವ ತಾಳ್ಮೆ, ವಾಹನ ಸವಾರರ ತಪ್ಪನ್ನು ಮಾತಲ್ಲೇ ತಿದ್ದಿ ತೀಡಿದ ರೀತಿ ಮಾತ್ರ ನಿಜಕ್ಕೂ ಎಲ್ಲಾ ಪೊಲೀಸರಿಗೂ ಮಾದರಿ. ಜೊತೆಗೆ ಜನ ಸಾಮಾನ್ಯರಿಗೂ ಪಾಠ.
ಬೆಳಗ್ಗೆಯಿಂದ ಸಂಜೆಯವರೆಗೆ ಬಿಸಿಲ ಝಳಕ್ಕೆ ಬೆಂದು ಹೈರಾಣಾಗುವ ಟ್ರಾಫಿಕ್ ಪೊಲೀಸರು, ತಮ್ಮ ಕೋಪ, ಆಕ್ರೋಶವನ್ನು ವಾಹನ ಚಾಲಕರ ಮೇಲೆ ತೋರಿಸುವುದು ಸರ್ವೇ ಸಾಮಾನ್ಯ….. ಅಪಾಯದ ಬಗ್ಗೆ ಅರಿವಿದ್ದರೂ, ಎಷ್ಟೇ ಬುದ್ಧಿವಾದ ಹೇಳಿದರೂ ಜನರು ಕೂಡ ರಾಜರೋಷವಾಗಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾ ಬೇಜವಾಬ್ದಾರಿ ಮೆರೆಯುತ್ತಲೇ ಇರುತ್ತಾರೆ ಬಿಡಿ…. ಆದರೆ ಯಾರೇ ತಪ್ಪ ಮಾಡಿದರೂ ’ತಪ್ಪು’ ಎಂದು ವ್ಯಕ್ತಿಗೆ ಮನದಟ್ಟಾಗುವ ರೀತಿಯಲ್ಲಿ ಹೇಳುವುದೂ ಕೂಡ ಒಂದು ಕಲೆ.
ಈ ಬಗ್ಗೆ ಹೆಚ್ಚು ಅರಿವಿರಬೇಕಾಗಿದ್ದು ಪೊಲೀಸರಿಗೆ. ಜನ ತಪ್ಪು ಮಾಡಿದಾಗ ಆ ತಪ್ಪಿನ ಬಗ್ಗೆ ಅವರಿಗೆ ಅರಿವಾಗುವಂತೆ ತಾಳ್ಮೆಯಿಂದ ಹೇಳುವುದು, ತಿದ್ದುವುದು ಪೊಲೀಸರ ಕೆಲಸ. ಆದರೆ ಅದೆಷ್ಟೋ ಬಾರಿ ಪೊಲೀಸರು ವಿಫಲರಾಗುತ್ತಾರೆ. ಹಾಗಾಗಿ ಪೊಲೀಸ್ ಇಲಾಖೆ ಬಗ್ಗೆ ಜನರು ಮೂಗು ಮುರಿಯುವುದೇ ಹೆಚ್ಚು. ಪೊಲೀಸರೇನೂ ಒಳ್ಳೆಯವರಲ್ಲ ಎಂಬ ಭಾವನೆಯೂ ಬಂದು ಬಿಟ್ಟಿದೆ. ಆದರೆ ಎಲ್ಲಾ ಪೊಲೀಸರೂ ಹಾಗಲ್ಲಾ. ಮಾನವೀಯತೆ, ಸಹನೆ ಇರುವ ಇಂಥಹ ಪೊಲೀಸರೂ ಇದ್ದಾರೆ ಎಂಬುದನ್ನು ಇಲ್ಲೊಂದು ವಿಡಿಯೋ ತೋರಿಸಿಕೊಟ್ಟಿದೆ.
ಬೈಕ್ ಸವಾರನೊಬ್ಬ ತಾನು ಫುಲ್ ಕವರ್ ಆಗುವ ಹೆಲ್ಮೆಟ್ ಧರಿಸಿ ಹಿಂಬದಿ ಕುಳಿತಿದ್ದವರಿಗೆ ಹಾಫ್ ಹೆಲ್ಮೆಟ್ ಹಾಕಿಸಿಕೊಂಡು ಬರುತ್ತಿದ್ದರು. ಬೈಕ್ ತಡೆದ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ನಯವಾಗಿ ಬೈಕ್ ಚಾಲಕನಿಗೆ ಬುದ್ಧಿವಾದ ಹೇಳಿದ್ದಾರೆ. ಅವರ ಮಾತಿನ ಪರಿ ಮನಮುಟ್ಟುವಂತಿದೆ. ಮಂಗಳೂರು ಸಮೀಪದ ತೊಕ್ಕೊಟ್ಟಿನಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೈಕ್ ಸವಾರನ ತಪ್ಪನ್ನು ಟ್ರಾಫಿಕ್ ಪೊಲೀಸ್ ಅಧಿಕಾರಿ ಮನವರಿಕೆ ಮಾಡಿದ ರೀತಿ…… ‘ನಿಮ್ಮಂತೆ ಅವರೂ ಕೂಡಾ ಬದುಕ ಬೇಡವೇ ?’ ಎನ್ನುವ ಒಂದು ಪ್ರಶ್ನೆ ಆ ಬೈಕ್ ಸವಾರನನ್ನು ಮಾತ್ರವಲ್ಲ ಪ್ರತಿಯೊಬ್ಬರನ್ನೂ ಸದಾ ಕಾಲ ಕಾಡುವಂತೆ ಮಾಡುತ್ತೆ. ಈ ಸಂಚಾರಿ ಪೊಲೀಸ್ ಅಧಿಕಾರಿ ಕಾರ್ಯವೈಖರಿಗೆ ನಿಜಕ್ಕೂ ಸೆಲ್ಯೂಟ್ ಹೇಳಲೇಬೇಕು.