
ಚಿತ್ರದುರ್ಗ: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ಹತ್ಯೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾದ ನಟ ವಿನೋದ್ ರಾಜ್, ಅವರ ಕುಟುಂಬದ ಸ್ಥಿತಿ ಕಂಡು ಅಕ್ಷರಶಃ ಕಣ್ಣೀರಾದರು.
ಕೆಲ ದಿನಗಳ ಹಿಂದೆ ಕೊಲೆ ಆರೋದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಭೇಟಿಯಾಗಿದ್ದ ನಟ ವಿನೋದ್ ರಾಜ್, ಇಂದು ಚಿತ್ರದುರ್ಗಕ್ಕೆ ತೆರಳಿ, ಮೃತ ರೇಣುಕಾಸ್ವಾಮಿ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ವೇಳೆ ರೇಣುಕಾಸ್ವಾಮಿ ಪತ್ನಿ ಹಾಗೂ ತಂದೆ, ತಾಯಿ ತಮಗಾದ ಅನ್ಯಾಯಕ್ಕೆ ಕಣ್ಣೀರಿಟಿದ್ದಾರೆ. ಇದೇ ವೇಳೆ ವಿನೋದ್ ರಾಜ್ ರೇಣುಕಾಸ್ವಾಮಿ ಕುಟುಂಬದವರಿಗೆ ಧೈರ್ಯ ತುಂಬಿ, 1 ಲಕ್ಷ ರೂ ಹಣ ಸಹಾಯವನ್ನು ಮಾಡಿದ್ದಾರೆ.
ರೇಣುಕಾಸ್ವಾಮಿ ಕುಟುಂಬದವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಡಿದ ವಿನೋದ್ ರಾಜ್, ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡಿರುವ ತಂದೆ-ತಾಯಿ, ಪತ್ನಿಯ ಪರಿಸ್ಥಿತಿ ನೋಡಿದರೆ ಕರುಳು ಕಿತ್ತುಬರುತ್ತದೆ, ಇಡೀ ಕುಟುಂಬ ಕಣ್ಣೀರಲ್ಲಿ ಪರಿತಪಿಸುತ್ತಿದೆ. ನಮ್ಮಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗದ್ಗದಿತರಾದರು.
ನಾವು ಮನುಷ್ಯರಾಗಿದ್ದೇವಾ ಎಂದು ಮುಟ್ಟಿ ನೋಡಿಕೊಳ್ಳುವ ಕಾಲ ಇದು…. ಪ್ರತಿಯೊಂದು ಜೀವಿಗೂ ಜೀವವಿದೆ…. ಮಕ್ಕಳು ಬಾಳಬೇಕು, ಬೆಳೆದು ಬೆಳಕಾಗಬೇಕು ಅಂತ ತಂದೆ-ತಾಯಿ ಬೆಳೆಸುತ್ತಾರೆ. ಆದರೆ ಸಮಾಜದಲ್ಲಿ ಕೆಟ್ಟದ್ದು ಹೆಚ್ಚಾದಾಗ ಇಂತಹ ಕೃತ್ಯಗಳು ನಡೆಯುತ್ತವೆ. ಹೀಗಾಗದಂತೆ ಎಚ್ಚೆತ್ತುಕೊಳ್ಳಬೇಕು. ನಮ್ಮಬಳಿ ಏನೇ ಇರಬಹುದು ಆದರೆ ಕೆಲವೊಮ್ಮೆ ನಮಗೆ ನಾವೇ ಕಡಿವಾಣ ಹಾಕಿಕೊಂಡು ಬದುಕಬೇಕು. ಕಲಾವಿದರನ್ನು ನೋಡಿ ಜನರು ಅನುಕರಣೆ ಮಾಡುತ್ತಾರೆ ಹಾಗಾಗಿ ನಾವು ಎಚ್ಚರದಿಂದ ಇರಬೇಕು. ಇಂತಹ ಘಟನೆ ನಡೆದಿರುವುದು ಆಘಾತಕಾರಿ ಎಂದು ಬೇಸರ ವ್ಯಕ್ತಪಡಿಸಿದರು.
ಹೆಸರು, ಕೀರ್ತಿ, ಜನಪ್ರಿಯತೆಯಲ್ಲಿರುವ ನಾವು ಸ್ವಲ್ಪ ಎಚ್ಚರವಾಗಿರಬೇಕು. ಉನ್ನತ ಸ್ಥಾನ, ಎತ್ತರದ ಮಟ್ಟದಲ್ಲಿರುವ ನಾವು ವಿವೇಕ ಮರೆಯಬಾರದು. ಅಚಾತುರ್ಯ ನಡೆಯುತ್ತವೆ. ಆದರೆ ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು ಎಂದು ಹೇಳಿದ್ದಾರೆ.