ಅಹಮದಾಬಾದ್: ಗುಜರಾತ್‌ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬನ ಮೇಲೆ ಅಮಾನುಷ ಕೃತ್ಯ ನಡೆದಿದೆ. ಕ್ರಿಕೆಟ್ ಪಂದ್ಯದ ವೇಳೆ ದಲಿತ ಬಾಲಕನೊಬ್ಬ ಚೆಂಡನ್ನು ಎತ್ತಿಕೊಂಡಿದ್ದಕ್ಕೆ ಆತನ 30 ವರ್ಷದ ಚಿಕ್ಕಪ್ಪನ ಹೆಬ್ಬೆರಳು ಕತ್ತರಿಸಿದ ಘಟನೆ ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ ನಡೆದಿದೆ.
ಪಟಾನ್ ಜಿಲ್ಲೆಯ ಸಿಧ್‌ಪುರ ತಾಲೂಕಿನ ಕಕೋಶಿ ಎಂಬಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಶಾಲೆಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯವನ್ನು ದಲಿತ ಸಮುದಾಯಕ್ಕೆ ಸೇರಿದ ಬಾಲಕ ವೀಕ್ಷಿಸುತ್ತಿದ್ದ. ಕ್ರಿಕೆಟ್ ಬಾಲ್ ತನ್ನ ಬಳಿಗೆ ಬಂದಾಗ ಆತ ಅದನ್ನು ಹಿಡಿದುಕೊಂಡಿದ್ದ. ಇದರಿಂದ ಆತನ ಜಾತಿ ಪ್ರಸ್ತಾಪಿಸಿ ನಿಂದಿಸಿದ್ದಾರೆ.
ಈ ವೇಳೆ ಬಾಲಕನ ಚಿಕ್ಕಪ್ಪ ಧೀರಜ್ ಪಾರ್ಮರ್ ಅವರು ಕೆಟ್ಟ ಬೈಗುಳಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಾಕ್ಸಮರ ಕೆಲ ಹೊತ್ತು ನಡೆದು ನಂತರ ಎಲ್ಲವೂ ತಣ್ಣಗಾಗಿತ್ತು. ಆದರೆ, ಸಂಜೆ ವೇಳೆ ಹರಿತವಾದ ಆಯುಧಗಳೊಂದಿಗೆ ಶಸ್ತ್ರಸಜ್ಜಿತರಾದ ಏಳು ಜನರ ಗುಂಪು, ದೂರುದಾರರಾದ ಧೀರಜ್ ಪಾರ್ಮರ್ ಮತ್ತು ಅವರ ಸಹೋದರ ಕೀರ್ತಿ ಪಾರ್ಮರ್ ಮೇಲೆ ಹಲ್ಲೆ ನಡೆಸಿದೆ. ಆರೋಪಿಗಳಲ್ಲಿ ಒಬ್ಬಾತ ಕೀರ್ತಿ ಅವರ ಹೆಬ್ಬೆರಳನ್ನು ಕತ್ತರಿಸಿ ಹಾಕಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.