ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪ ಹಿನ್ನೆಲೆಯಲ್ಲಿ ಎಂಎಲ್ ಸಿ ಸಿ.ಟಿ.ರವಿ ಅವರಿಗೆ ಪರಿಷತ್ ಸಭಾಪತಿ ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಕಲಾಪವನ್ನು ಅನಿಷ್ಟಾವಧಿಗೆ ಮುಂದೂಡಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ ಖಂಡಿಸಿ ವಿಧಾನಪರಿಷತ್ ನಲ್ಲಿ ಬೆಳಿಗ್ಗೆ ಕಾಂಗ್ರೆಸ್ ಪ್ರತಿಭಟನೆ ವೇಳೆ ಬಿಜೆಪಿ ಸದಸ್ಯ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸಿಡಿದೆದ್ದ ಕಾಂಗ್ರೆಸ್ ನಾಯಕರು ಸಿ.ಟಿ.ರವಿ ವಿರುದ್ಧ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ದೂರು ನೀಡಿದ್ದಾರೆ. ಮತ್ತೊಂದೆ ಸುವರ್ಣಸೌಧದ ಬಳಿ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರಿಂದ ಸಿ.ಟಿ.ರವಿ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎನ್ನಲಾದ ಸಿ.ಟಿ.ರವಿ ಅವರ ಮಾತು ಖಂಡನೀಯ. ಯಾರ ಬಗ್ಗೆಯೇ ಆಗಲಿ ಇಂತಹ ಪದ ಬಳಕೆ ಸರಿಯಲ್ಲ. ಓರ್ವ ಜನಪ್ರತಿನಿಧಿಯಾಗಿ ಜವಾಬ್ದಾರಿಗಳನ್ನು ಅರಿತು ಮಾತನಡಬೇಕು. ಸಿ.ಟಿ.ರವಿ ಹೇಳಿಕೆ ಆಕ್ಷೇಪಾರ್ಹ ಹಾಗೂ ಖಂಡನೀಯ ಎಂದರು. ಬಳಿಕ ವಿಧಾನಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಕಲಾಪ ಮುಂದೂಡುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಸಿ.ಟಿ.ರವಿ ವಿರುದ್ಧ ಮುಗಿ ಬಿದ್ದು ಆಕ್ರೋಶ ವ್ಯಕ್ತಪಡಿಸಿದರು. ಸಭಾಪತಿ ಹೊರಟ್ಟಿ ಕಲಾಪದಿಂದ ತೆರಳಿದ ಬಳಿಕವೂ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಸದನದಲ್ಲಿ ಗದ್ದಲ-ಗಲಾಟೆ ಮುಂದುವರೆಯಿತು.