ಈಗಿನ ಜಮಾನದಲ್ಲಿ ವಾಟ್ಸಾಪ್ ಬಳಕೆ ಮಾಡದವರ ಸಂಖ್ಯೆಯೇ ಕಡಿಮೆ. ಅಷ್ಟರ ಮಟ್ಟಿಗೆ ವಾಟ್ಸಾಪ್ ತನ್ನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ ನಾಗ್ಪುರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಾಟ್ಸಾಪ್ ಬಳಕೆದಾರರಿಗೆ ಇಂದು ಆಘಾತ ಕಾದಿತ್ತು. ತೀವ್ರವಾದ ತುರ್ತು ಎಚ್ಚರಿಕೆ ಎಂಬ ಸಂದೇಶವೊಂದನ್ನು ಅನೇಕರು ವಾಟ್ಸಾಪ್ನಲ್ಲಿ ಸ್ವೀಕರಿಸಿದ್ದು ಶಾಕ್ ಆಗಿದ್ದಾರೆ. ಇದು ಕೇಂದ್ರ ದೂರಸಂಪರ್ಕ ಇಲಾಖೆ ನೀಡಿದ ಎಚ್ಚರಿಕೆಯ ಸಂದೇಶವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ. ಭಾರತೀಯರ ಟೆಲಿಕಾಂ ಇಲಾಖೆಯಿಂದ ವೈರ್ಲೆಸ್ ಸಂದೇಶವನ್ನು ನಾಗ್ಪುರ ಸೇರಿದಂತೆ ದೇಶದ ವಿವಿಧ ಭಾಗದ ಜನರಿಗೆ ಕಳುಹಿಸಲಾಗಿದೆ. ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಈ ಸಂದೇಶವನ್ನು ಕಳುಹಿಸಲಾಗಿದ್ದು ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡಿದೆ. ಇಂತಹ ಸಂದೇಶ ತಮಗೇಕೆ ಬಂತು ಎಂದು ವಾಟ್ಸಾಪ್ ಬಳಕೆದಾರರು ಚಿಂತೆಗೆ ಒಳಗಾಗಿದ್ದಾರೆ. ಇದಾದ ಬಳಿಕ ಮಾಧ್ಯಮಗಳು ನಡೆಸಿದ ಸಂಶೋಧನೆಯಲ್ಲಿ ಪ್ರಾಥಮಿಕವಾಗಿ ಪ್ರತಿಕೂಲ ಹವಾಮಾನದ ಬಗ್ಗೆ ಎಚ್ಚರಿಕೆಯನ್ನು ನೀಡಲು ಈ ಸಂದೇಶ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಆದರೆ ಈ ಸಂದೇಶ ಯಾಕೆ ತಮ್ಮ ಮೊಬೈಲ್ಗೆ ಬಂದಿದೆ ಎಂಬ ಅರಿವಿಲ್ಲದ ಅನೇಕರು ಗೊಂದಲಕ್ಕೆ ಒಳಗಾಗಿ ಈ ಸಂದೇಶವನ್ನು ಡಿಲೀಟ್ ಮಾಡಿದ್ದಾರೆ. ಆದರೆ ಇನ್ನೂ ಕೆಲವರು ತೀವ್ರವಾದ ಬಿರುಗಾಳಿ ಸೇರಿದಂತೆ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ಅನುಕರಿಸುವ ಪರೀಕ್ಷೆಯಾಗಿರಬಹುದು ಎಂದು ಊಹಿಸಲಾಗಿದೆ.
ಮತ್ತೊಂದು ವರದಿಯ ಪ್ರಕಾರ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ದೇಶಾದ್ಯಂತ 20 ಕಡೆಗಳಲ್ಲಿ ಡ್ರೈವ್ ಪರೀಕ್ಷೆ ನಡೆಸಿದೆ. ಧ್ವನಿ ಮತ್ತು ಡೇಟಾ ಸೇವೆಗಳಿಗಾಗಿ ಸೆಲ್ಯುಲಾರ್ ಮೊಬೈಲ್ ದೂರಾವಣಿ ಸೇವಾ ಪೂರೈಕೆದಾರರು ಒದಗಿಸುವ ನೆಟ್ವರ್ಕ್ನ ಗುಣಮಟ್ಟ ನಿರ್ಣಯಿಸಲು ಈ ಡ್ರೈವ್ ಪರೀಕ್ಷೆ ನಡೆಸಿದೆ ಎನ್ನಲಾಗಿದೆ.