ಮೈಸೂರು: ನಿಮ್ಮ ಪ್ರೀತಿ ವಿಶ್ವಾಸ ನನಗೆ ಧೈರ್ಯ ಕೊಟ್ಟಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ವರುಣಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ನಾನು ರಾಜಕಾರಣಕ್ಕೆ ಬರಬೇಕೆಂದು ಎಂದೂ ಅಂದುಕೊಂಡಿರಲಿಲ್ಲ. ಕಳೆದ ಬಾರಿ ಅನಿರೀಕ್ಷಿತವಾಗಿ ಅಭ್ಯರ್ಥಿ ಮಾಡಿ ಎಂದು ಹೇಳಿದ್ದೀರಿ. ಅದಕ್ಕಾಗಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಿಲ್ಲಲು ಪ್ರಯತ್ನಿಸಿದೆ. ವರುಣಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ನಿಲ್ಲಲು ನನಗೆ ಸಲಹೆ ಬಂದಿತ್ತು ಎಂದು ತಿಳಿಸಿದ್ದಾರೆ.
ಆಗ ಯಡಿಯೂರಪ್ಪ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದರು. ಅವರ ಮಗನಾಗಿ ಪಕ್ಷದ ವಿರುದ್ಧ ಹೋಗಬಾರದೆಂದು ತೀರ್ಮಾನಿಸಿ ಸ್ಪರ್ಧಿಸಲಿಲ್ಲ. ಅದಕ್ಕಾಗಿಯೇ ನಾನು ಚುನಾವಣಾ ಅಖಾಡದಿಂದ ಹಿಂದೆ ಸರಿದಿದ್ದೆ. ಅಂದಿನ ಚಿತ್ರಣ ಈಗಲೂ ನನ್ನ ಕಣ್ಮುಂದೆ ಇದೆ. ಸ್ಪರ್ಧಿಸದ ಹಿನ್ನೆಲೆ ಎಷ್ಟೋ ಜನ ವಾಪಸ್ ಊರಿಗೆ ಹೋಗಿರಲಿಲ್ಲ. ನಾನು ಸಂಯಮ ಕಳೆದುಕೊಂಡಿದ್ದರೆ ನಮ್ಮ ಪಕ್ಷಕ್ಕೆ ಹಾನಿಯಾಗುತ್ತಿತ್ತು.
ಅವತ್ತು ಸ್ಪರ್ಧೆ ಮಾಡದೇ ಇರುವುದಕ್ಕೆ ವರುಣಾ ಕ್ಷೇತ್ರದ ಕಾರ್ಯಕರ್ತರಲ್ಲಿ ವಿಜಯೇಂದ್ರ ಅವರು ಕ್ಷಮೆ ಯಾಚಿಸಿದ್ದಾರೆ. ಅಭ್ಯರ್ಥಿ ಮಾಡಲಿಲ್ಲ. ನಿಮ್ಮ ಪ್ರೀತಿಯಿಂದ ನನಗೆ ಉತ್ತಮ ಸ್ಥಾನ ಸಿಕ್ಕಿತು. ವರುಣಾ ಕ್ಷೇತ್ರದ ಪ್ರೀತಿಯಿಂದ ಕೆಆರ್ ಪೇಟೆಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದರು.
ನನ್ನನ್ನು ಇಡೀ ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟಿದ್ದು ವರುಣಾ ಕ್ಷೇತ್ರ. ಯಡಿಯೂರಪ್ಪ ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುತ್ತಾರೆ. ಎಲ್ಲಾ ವರ್ಗಗಳನ್ನು ಒಂದು ಕುಟುಂಬದಂತೆ ಕರೆದೊಯ್ಯಬೇಕು. ಇದು ಯಡಿಯೂರಪ್ಪನವರ ಆಶಯವಾಗಿದೆ. ನಾನು ಯಡಿಯೂರಪ್ಪನವರ ಹಾದಿಯಲ್ಲಿ ಸಾಗಲು ಬಂದಿದ್ದೇನೆ. ವರುಣಾ ಕ್ಷೇತ್ರ ಬೇರೆ ಶಿಕಾರಿಪುರ ಕ್ಷೇತ್ರ ಬೇರೆ ಎಂದುಕೊಂಡಿಲ್ಲ. ಯಡಿಯೂರಪ್ಪನವರಿಗೆ ರಾಜಕೀಯ ಜನ್ಮ ನೀಡಿದ್ದು ಶಿಕಾರಿಪುರ. ಪಕ್ಷ ಏನೇ ತೀರ್ಮಾನ ಮಾಡಿದರೂ ನನ್ನ ಹೃದಯದಲ್ಲಿ ಇರುತ್ತೀರಿ ಎಂದು ಹೇಳಿದ್ದಾರೆ.