ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ವರುಣಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತವಾಗಿದೆ.
ಅಪ್ಪನಿಗಾಗಿ ಡಾ. ಯತೀಂದ್ರ ಕ್ಷೇತ್ರ ತ್ಯಾಗ ಮಾಡಿದ್ದು, ಸಿದ್ದರಾಮಯ್ಯ ವರುಣಾ ಜೊತೆಗೆ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿಯೂ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು.
ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ. ವಿಜಯೇಂದ್ರ ಸ್ಪರ್ಧಿಸುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲೇ ಅವರು ವರುಣಾದಲ್ಲಿ ಸ್ಪರ್ಧಿಸಲು ಒತ್ತಾಯ ಕೇಳಿಬಂದಿತ್ತು. ಆದರೆ, ಅವರು ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಈ ಕುರಿತಾಗಿ ಚರ್ಚೆ ನಡೆಸಿದ್ದಾರೆ. ವರುಣಾ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಅಮಿತ್ ಶಾ ಅವರೊಂದಿಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಚರ್ಚಿಸಿದ್ದಾರೆ. ಆದರೆ ವಿಜಯೇಂದ್ರ ಸ್ಪರ್ಧೆಯ ವಿಚಾರವಾಗಿ ಅಲ್ಲ.
ಈ ಬಗ್ಗೆ ಮಾತನಾಡಿದ ವಿಜಯೇಂದ್ರ, ಕ್ಷೇತ್ರಗಳ ಸ್ಥಿತಿ ಗತಿಯ ಕುರಿತಾಗಿ ಮಾತನಾಡಿದ್ದೇವೆ. ನನ್ನ ಸ್ಪರ್ಧೆ ವಿಚಾರವಾಗಿ ಅಲ್ಲ. ಶಿಕಾರಿಪುರ ಜನರ ಬಯಕೆಯಂತೆ ಪ್ರಚಾರ ನಡೆಸುತ್ತಿದ್ದು, ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ವರುಣಾದಲ್ಲಿ ಸ್ಪರ್ಧಿಸುವ ಕುರಿತಾಗಿ ಕುತೂಹಲ ಮೂಡಿಸಿದ್ದಾರೆ.