ಮೈಸೂರು: ಹೆಣ್ಣು ಕರು ಜನನದ ಲಸಿಕೆಗೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುವುದು ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.
ಮೈಸೂರು ತಾಲೂಕಿನ ಉತ್ತನಹಳ್ಳಿಯಲ್ಲಿ ನಡೆದ ಪಶುಸಖಿಯರಿಗೆ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪಶು ಸಂಗೋಪನೆ ಇಲಾಖೆ ಹೊಸ ಯೋಜನೆ ಜಾರಿಗೊಳಿಸಿದೆ. ಹೆಣ್ಣು ಭ್ರೂಣ ಮಾತ್ರ ಇರುವ ಲಸಿಕೆ ತಯಾರು ಮಾಡಲಾಗಿದೆ. ಹೆಣ್ಣು ಕರು ಮಾತ್ರ ಹುಟ್ಟುವ ಲಸಿಕೆಗೆ ಇಲಾಖೆಯಿಂದ ಸಬ್ಸಿಡಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಲಸಿಕೆಯಿಂದ ಶೇಕಡ 95 ರಷ್ಟು ಹೆಣ್ಣು ಕರು ಮಾತ್ರ ಹುಟ್ಟುತ್ತದೆ. ವೈದ್ಯರ ಬಳಿ ಇಂಜೆಕ್ಷನ್ ಹಾಕಿಸಿ ಒಂದು ಲಸಿಕೆಗೆ ರೈತರು 250 ರೂ. ಪಾವತಿಸಬೇಕು. ಇದಕ್ಕೆ ಸರ್ಕಾರ 450 ರೂಪಾಯಿ ಸಬ್ಸಿಡಿ ನೀಡಲಿದೆ ಎಂದು ತಿಳಿಸಿದ್ದಾರೆ.
ಕೃಷಿ ಇಲಾಖೆ, ಪಶು ಸಂಗೋಪನೆ, ತೋಟಗಾರಿಕೆ ಇಲಾಖೆ ಸೇರಿದಂತೆ ಕೃಷಿ ಮತ್ತು ಪಶು ವಲಯಕ್ಕೆ ಸಂಬಂಧಿಸಿದ ಇಲಾಖೆಗಳು ಜಾರಿ ಮಾಡುವ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ಸಲಹೆಗಳನ್ನು ಪಶುಸಖಿಯರು ನೀಡಲಿದ್ದಾರೆ. ರೈತರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲಿದ್ದಾರೆ. ಆಶಾ ಕಾರ್ಯಕರ್ತೆಯರ ಮಾದರಿಯಲ್ಲಿ ಪಶುಸಖಿಯರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಪಶು ಆಂಬುಲೆನ್ಸ್ ಗಳ ಸಂಖ್ಯೆ ಹೆಚ್ಚಿಸಲಾಗುವುದು. ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.