ಇಂದು ಪ್ರತಿಯೊಂದು ಸಮಸ್ಯೆಗೂ ವೈದ್ಯರಲ್ಲಿ ತೆರಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಮ್ಮಲ್ಲಿರುವ ಪ್ರಕೃತಿ ಸಂಪನ್ಮೂಲಗಳಿಂದ ಎಷ್ಟೋ ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಳ್ಳಬಹುದು ಎಂಬ ಅಂಶ ಹಲವರಿಗೆ ತಿಳಿದೇ ಇಲ್ಲ.
ಅದರಲ್ಲಿಯೂ ಪ್ರತಿಯೊಬ್ಬರೂ ತಮ್ಮ ಸೌಂದರ್ಯವರ್ಧನೆಗಾಗಿ ಹಲವಾರು ಕಸರತ್ತು ನಡೆಸುತ್ತಾರೆ. ಅದರಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದೇ ತ್ವಚೆಯನ್ನು ಕಾಂತಿಯುತವಾಗಿಸುವ ಉಪಾಯವೊಂದು ಇಲ್ಲಿದೆ.
ಮಲೆನಾಡಿನ ಕಾಡುಗಳಲ್ಲಿ ಸಮೃದ್ದವಾಗಿ ದೊರೆಯುವ ಜೇನುತುಪ್ಪ ಹಲವು ಖಾಯಿಲೆಗಳಿಗೆ ರಾಮಬಾಣವಾಗಿದ್ದು, ಅದರಲ್ಲಿಯೂ ಚರ್ಮದ ಸಮಸ್ಯೆಗಳಿಗೆ ಅಮೃತ ಸಂಜೀವಿನಿಯಾಗಿದೆ. ವಿಟಮಿನ್, ಪ್ರೋಟಿನ್ ಮತ್ತು ರೋಗ ನಿರೋಧಕ ಜೀವಸತ್ವಗಳಿಂದ ಸಮೃದ್ಧವಾಗಿರುವ ಜೇನುತುಪ್ಪದ ವಿಟಮಿನ್ ‘ಸಿ’ ವಿಕಿರಣಗಳಿಂದ ಹಾನಿಗೀಡಾದ ಚರ್ಮದ ಪದರಗಳನ್ನು ಸರಿಪಡಿಸುವುದಲ್ಲದೇ ವಿಟಮಿನ್ ‘ಬಿ 5’ ಚರ್ಮದಲ್ಲಿ ಉತ್ಪತ್ತಿಯಾಗುವ ಎಣ್ಣೆಯ ಅಂಶವನ್ನು ತೆಗೆದು ಒಣ ಚರ್ಮವನ್ನು ಮೃದುಗೊಳಿಸುತ್ತದೆ.
ಬಳಕೆ ಹೇಗೆ…?
ಒಂದು ಚಮಚ ಜೇನುತುಪ್ಪಕ್ಕೆ ಸಮ ಪ್ರಮಾಣದ ಕಿತ್ತಳೆ ರಸವನ್ನು ಬೆರಸಿ ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ಅಥವಾ ಸಿಪ್ಪೆ ತೆಗೆದ ಸೇಬನ್ನು ಚೆನ್ನಾಗಿ ರುಬ್ಬಿ ಅದಕ್ಕೆ 4 ಚಮಚ ಜೇನುತುಪ್ಪ ಬೆರೆಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 10 ನಿಮಿಷಗಳ ಕಾಲ ಬಿಟ್ಟು ಹದ ಬಿಸಿ ನೀರಿನಲ್ಲಿ ತೊಳೆದುಕೊಂಡರೆ ಚರ್ಮದ ತೇವಾಂಶ ಹೆಚ್ಚುವುದರ ಜತೆಗೆ ತ್ವಚೆಗೆ ಹೊಳಪು ನೀಡುತ್ತದೆ.
ಬಾಳೆಹಣ್ಣಿಗೆ ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 5-10 ನಿಮಿಷಗಳ ನಂತರ ಹದ ಬಿಸಿ ನೀರಿನಲ್ಲಿ ಮುಖ ತೊಳೆದುಕೊಂಡರೆ ತ್ವಚೆ ಮೃದುವಾಗುತ್ತದೆ.
ಜೇನುತುಪ್ಪ ಮತ್ತು ಮಾಯಿಶ್ಚರೈಸಿಂಗ್ ಲೋಷನ್ ಸೇರಿಸಿ ಕ್ರೀಮ್ ತಯಾರಿಸಿ ತ್ವಚೆಗೆ ಹಚ್ಚಿ 15 ನಿಮಿಷಗಳ ನಂತರ ಬಿಸಿ ನೀರಿನಿಂದ ತೊಳೆದರೆ ತ್ವಚೆಯ ಕಾಂತಿ ನೈಸರ್ಗಿಕವಾಗಿ ವೃದ್ಧಿಯಾಗಲು ಸಹಕಾರಿಯಾಗುತ್ತದೆ.
ಹೀಗೆ ಹಲವು ರೀತಿಯಲ್ಲಿ ಜೇನುತುಪ್ಪವನ್ನು ಸೌಂದರ್ಯವರ್ಧಕವಾಗಿ ಬಳಸಬಹುದಾಗಿದ್ದು, ಉತ್ತಮ ಹಾಗೂ ಪರಿಶುದ್ದ ಜೇನುತುಪ್ಪ ಬಳಸಿದಲ್ಲಿ ಉತ್ತಮ ಫಲಿತಾಂಶ ಶತಃ ಸಿದ್ದ.