ನ್ಯೂಯಾರ್ಕ್: ಅಮೆರಿಕದ ಇತಿಹಾಸದಲ್ಲಿಯೇ ನಾಲ್ಕನೇ ಅತಿ ಬೃಹತ್ ಮೊತ್ತದ ಲಾಟರಿ ಬಹುಮಾನವಾಗಿರುವ 1.35 ಬಿಲಿಯನ್ ಡಾಲರ್ ಓರ್ವ ವ್ಯಕ್ತಿ ಗೆದ್ದಿದ್ದು, ಆತ ತನ್ನನ್ನು ಬಹಿರಂಗಪಡಿಸಿಕೊಳ್ಳಲು ಇಚ್ಛಿಸಿಲ್ಲ. ಈ ಹಿನ್ನೆಲೆಯಲ್ಲಿ ಆತ ಅಮಾನಧೇಯನಾಗಿಯೇ ಉಳಿದಿದ್ದಾನೆ.
ಲಾಟರಿ ಟಿಕೇಟ್ ಮಾರಾಟಗಾರ ಕಂಪೆನಿಯಾದ ಲಕೋಮಾ ಐಲ್ಯಾಂಡ್ ಇನ್ವೆಸ್ಟ್‌ಮೆಂಟ್ಸ್ ಈ ವಿಷಯವನ್ನು ಬಹಿರಂಗಪಡಿಸಿದೆ. ಅವರು ಕೆಲವೊಂದು ಕಾರಣಗಳಿಂದ ನಿಗೂಢವಾಗಿಯೇ ಇರಲು ಇಚ್ಛಿಸಿದ್ದಾರೆ. ಆದ್ದರಿಂದ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದಿದೆ.
ಇದಾಗಲೇ ಎಲ್ಲಾ ತೆರಿಗೆಗಳನ್ನು ಕಡಿತಗೊಳಿಸಿ ಅವರ ಹಣವನ್ನು ಅವರು ಹೇಳಿರುವ ಖಾತೆಗೆ ಜಮಾ ಮಾಡಲಾಗುವುದು. ಆದರೆ ಅವರು ಯಾರು ಎಂಬ ಬಗ್ಗೆ ಸಾರ್ವಜನಿಕವಾಗಿ ಬಹಿರಂಗಗೊಳಿಸಲಾಗುವುದಿಲ್ಲ ಎಂದಿದ್ದಾರೆ. ಅಸಲಿಗೆ ಅವರನ್ನು ತಾವು ಕೂಡ ನೋಡಿಲ್ಲ ಎಂದು ಮೈನೆ ಬ್ಯೂರೋ ಆಫ್ ಆಲ್ಕೋಹಾಲಿಕ್ ಪಾನೀಯಗಳು ಮತ್ತು ಲಾಟರಿ ಕಾರ್ಯಾಚರಣೆಯ ಉಪ ನಿರ್ದೇಶಕ ಮೈಕೆಲ್ ಬೋರ್ಡ್‌ಮನ್ ಹೇಳಿದ್ದಾರೆ.
ಇವರು ಜನವರಿ 13 ರಂದು ಲೆಬನಾನ್‌ನ ಹೋಮ್‌ಟೌನ್ ಗ್ಯಾಸ್ & ಗ್ರಿಲ್‌ನಲ್ಲಿ ಲಾಟರಿ ಖರೀದಿ ಮಾಡಿದ್ದಾರೆ ಎಂಬ ಮಾಹಿತಿಯಷ್ಟೇ ಲಭ್ಯವಾಗಿದೆ. ಆದರೆ ಅವರು ಯಾರು ಎನ್ನುವುದು ಇದುವರೆಗೂ ಬಹಿರಂಗಗೊಂಡಿಲ್ಲ. ಅದು ಅವರಿಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ. ನಮಗೂ ಆತ ಯಾರು ಎಂದು ನೋಡುವ ಕುತೂಹಲವಿದೆ. ಕೆಲವೊಮ್ಮೆ ಲಾಟರಿ ಖರೀದಿ ಮಾಡಿದ ಅಂಗಡಿಗೆ ಬಂದು ಧನ್ಯವಾದ ಸಲ್ಲಿಸುವ ಚಾನ್ಸ್ ಇದ್ದು, ಆಗಲಾದರೂ ಆ ವ್ಯಕ್ತಿಯನ್ನು ನೋಡಬಹುದೇನೋ ಎಂದು ಮೈಕೆಲ್ ಬೋರ್ಡ್‌ಮನ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ವ್ಯಕ್ತಿ ಎಲ್ಲರಿಗೂ ಕುತೂಹಲಕಾರಿಯಾಗಿದ್ದಾರೆ.