ಲಖ್ನೋ: ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಪೊಲೀಸರು ಉದ್ಯಾನವನದಲ್ಲಿ ಸುತ್ತಾಡುತ್ತಿದ್ದ ನಿಶ್ಚಿತಾರ್ಥವಾದ ಜೋಡಿಗೆ ಕಿರುಕುಳ ನೀಡಿದ್ದಾರೆ.
ಅಲ್ಲದೇ ಪೊಲೀಸರು ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಯುವತಿಗೆ ಒತ್ತಡ ಹೇರಿದ್ದಲ್ಲದೆ, ಅವರನ್ನು ಬಿಡುವ ನೆಪದಲ್ಲಿ 5.5 ಲಕ್ಷ ರೂ. ಕೊಡುವಂತೆ ಬೆದರಿಸಿದ್ದಾರೆ. ಸಂತ್ರಸ್ತ ಜೋಡಿಗೆ ಸುಮಾರು ಮೂರು ಗಂಟೆಗಳ ಕಾಲ ಕಿರುಕುಳ ನೀಡಿದ್ದಾರೆ. ಅಂತಿಮವಾಗಿ ಪೇಟಿಎಂನಲ್ಲಿ ಅಧಿಕಾರಿಗೆ 1,000 ರೂ ಪಾವತಿಸಿದ ನಂತರ ಸ್ಥಳದಿಂದ ತೆರಳಿದರು.
ಸೆಪ್ಟೆಂಬರ್ 16 ರಂದು ಸಾಯಿ ಉಪ್ವಾನ್ ಪಾರ್ಕ್ ನಲ್ಲಿ ಘಟನೆ ನಡೆದಿದೆ. ನಿಶ್ಚಿತ ವರನನ್ನು ಯುವತಿ ಭೇಟಿಯಾದಾಗ ಮೂವರು ಪುರುಷರು ಘಟನಾ ಸ್ಥಳಕ್ಕೆ ಬಂದರು. ಇಬ್ಬರು ಸಮವಸ್ತ್ರದಲ್ಲಿದ್ದರು. ಒಬ್ಬರು ಕ್ಯಾಶುಯಲ್ ಬಟ್ಟೆಯಲ್ಲಿದ್ದರು. ನಂತರ ಅವರು ಜೋಡಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಸಂತ್ರಸ್ತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಯುವತಿಗೆ ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದಾರೆ.
ಆಕೆಯ ನಿಶ್ಚಿತ ವರ ಅವರನ್ನು ಬಿಡುವಂತೆ ಅವರ ಮುಂದೆ ಮನವಿ ಮಾಡಿದರೂ ಅವರು ಯುವತಿ ವಿರುದ್ಧ ತಮ್ಮ ನಿಂದನೆಯನ್ನು ಮುಂದುವರೆಸಿದರು. ಪೇಟಿಎಂನಲ್ಲಿ 1,000 ರೂಪಾಯಿಯನ್ನು ಪೊಲೀಸರಿಗೆ ಪಾವತಿಸಿದ ನಂತರ ಮೂರು ಗಂಟೆಗಳ ಬಳಿಕ ಸ್ಥಳದಿಂದ ಹೊರಹೋಗಲು ಬಿಟ್ಟಿದ್ದಾರೆ.
ಆರೋಪಿ ಕಾನ್ ಸ್ಟೆಬಲ್ ಮತ್ತು ಹೋಮ್ ಗಾರ್ಡ್ ಸೆಪ್ಟಂಬರ್ 22 ರಂದು ಸಂತ್ರಸ್ತೆಯ ಮನೆಗೆ ತಲುಪಿ, ಹಣವನ್ನು ಹಿಂದಿರುಗಿಸಿದ್ದಾರೆ. ದೂರು ದಾಖಲಿಸದಂತೆ ಬೆದರಿಕೆ ಹಾಕಿದ್ದಾರೆ. ಆದರೆ ಯುವತಿ ಧೈರ್ಯ ತಂದುಕೊಂಡು ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ಔಪಚಾರಿಕವಾಗಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತ ಮಹಿಳೆ, ಗೌತಮ್ ಬುದ್ಧ ನಗರದ ಬಿಸ್ರಖ್ ಪೊಲೀಸ್ ಠಾಣೆಯ ನಿವಾಸಿ ಸೆಪ್ಟೆಂಬರ್ 28 ರಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಆಕೆಯ ದೂರಿನ ಮೇರೆಗೆ ಅಧಿಕಾರಿಗಳು ತನಿಖೆ ಆರಂಭಿಸಿದಾಗ, ಆರೋಪಗಳು ದೃಢಪಟ್ಟಿವೆ. ನಂತರ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ತಕ್ಷಣವೇ ಅಮಾನತುಗೊಳಿಸಿದ್ದಾರೆ. ಮೂರನೇ ಆರೋಪಿ ಗೃಹರಕ್ಷಕನನ್ನು ವಜಾಗೊಳಿಸಿದ ವರದಿಯನ್ನು ತಯಾರಿಸಿ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್‌ಗೆ ಕಳುಹಿಸಲಾಯಿತು.