ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು 51 ವರ್ಷ ಪೂರೈಸಿದ್ದಾರೆ. ತಮ್ಮ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅವರು ಗೋರಖನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಪ್ರಮುಖ ನಾಯಕರು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
“ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ಸಂಪೂರ್ಣ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಉತ್ತರ ಪ್ರದೇಶವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ. ದೇವರು ಅವರನ್ನು ಆರೋಗ್ಯವಾಗಿ ಮತ್ತು ದೀರ್ಘಕಾಲ ಬದುಕಿಗಾಗಿ ಹರಸಲಿ,” ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಸಿಎಂ ಯೋಗಿ ಉತ್ತರಾಖಂಡದ ಹಳ್ಳಿಯೊಂದರಲ್ಲಿ ಜೂನ್ 5, 1972 ರಂದು ಜನಿಸಿದರು. ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಚಳುವಳಿಯಲ್ಲಿ ಸೇರಲು ತಮ್ಮ ಮನೆಯನ್ನು ತೊರೆದರು ಮತ್ತು ಗೋರಖ್‌ಪುರದ ಗೋರಖನಾಥ ದೇವಾಲಯದ ಮಹಂತ್ ಅವೈದ್ಯನಾಥರ ಶಿಷ್ಯರಾದರು.
ಮಹಂತ್ ಅವೈದ್ಯನಾಥರ ಮರಣದ ನಂತರ ಗೋರಖನಾಥ ಮಠದ ಪ್ರಧಾನ ಅರ್ಚಕರಾದರು. ಯೋಗಿ 1998 ರಲ್ಲಿ ತಮ್ಮ ರಾಜಕೀಯ ಪ್ರಯಾಣವನ್ನು ಗೋರಖ್‌ಪುರದಿಂದ ಆರಂಭಿಸಿದರು. ಅವರು 1998 ರಿಂದ 2017 ರವರೆಗೆ ಸತತ ಐದು ಅವಧಿಗೆ ಗೋರಖ್‌ಪುರ ಸಂಸದರಾಗಿದ್ದರು.
ಅವರು ತಮ್ಮ ಪೂರ್ಣ ಐದು ವರ್ಷಗಳ ಅವಧಿಯ ನಂತರ ಈ ವರ್ಷದ ಆರಂಭದಲ್ಲಿ ಸತತವಾಗಿ ಎರಡನೇ ಬಾರಿಗೆ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿಯಾದರು.