16 ವರ್ಷದ ಅಪ್ರಾಪ್ತ ಪ್ರಿಯಕರನ ಮನೆಯಲ್ಲೇ ಉಳಿದು ಅವನನ್ನೇ ಮದುವೆಯಾಗುತ್ತೇನೆ, ಇದಕ್ಕೆ ಅವಕಾಶ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ 25 ವರ್ಷದ ಯುವತಿ ಬೆದರಿಕೆ ಹಾಕಿರುವುದು ಪೊಲೀಸರಿಗೆ ಪೀಕಲಾಟ ತಂದಿಟ್ಟಿದೆ.
ಉತ್ತರ ಪ್ರದೇಶದ ಮೀರತ್‌ನ 25 ವರ್ಷದ ಯುವತಿಯೊಬ್ಬಳು ತನ್ನ 16 ವರ್ಷದ ಪ್ರಿಯಕರನ ಮನೆಯಲ್ಲಿಯೇ ಇರಲು ಬಯಸಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಹುಡುಗನೊಂದಿಗೆ ಸ್ನೇಹ ಬೆಳೆಸಿದ್ದ ಯುವತಿ ಶಾಮ್ಲಿಯಲ್ಲಿನ ಅಪ್ರಾಪ್ತ ಹುಡುಗನ ಮನೆಗೆ ಬಂದಿದ್ದಳು. ಆಕೆ ಕಳೆದ ಕೆಲವು ದಿನಗಳಿಂದ ತಮ್ಮ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಇಲ್ಲಿಂದ ಹೋಗುವಂತೆ ಆಕೆಗೆ ಹೇಳಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ, ಈ ಸಮಸ್ಯೆ ಬಗೆಹರಿಸಿ ಎಂದು ಹುಡುಗನ ಕುಟುಂಬವು ಪೊಲೀಸ್ ಮತ್ತು ಶಾಮ್ಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ನ ಸಹಾಯವನ್ನು ಕೋರಿತು.
ಹುಡುಗನ ತಂದೆ ಮತ್ತು ಇತರ ಸಂಬಂಧಿಕರು ಮೊದಲು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದರು ಅವರು ಸಮಸ್ಯೆ ಪರಿಹರಿಸಲು ವಿಫಲವಾದಾಗ ಕುಟುಂಬವು ಶಾಮ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಹೋಯಿತು.
ನನ್ನ ಮಗ ಓದಿಲ್ಲ, ಯಾವ ಕೆಲಸವನ್ನೂ ಮಾಡುವುದಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ. ಇದುವರೆಗೂ ನಮ್ಮ ಮನೆಯಲ್ಲೇ ಇದ್ದ ಯುವತಿ, ಹೊರಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಆತನ ತಂದೆ ಹೇಳಿದ್ದಾರೆ.
ಯುವತಿಯನ್ನು ಸಂಬಂಧಿಕರಿಗೆ ಒಪ್ಪಿಸಿ ಮನೆಗೆ ಕಳುಹಿಸಿದ್ದರು. ಆದರೆ ಆಕೆಯ ಕುಟುಂಬವು ಅವಳು ಕುಟುಂಬಕ್ಕೆ ಕೆಟ್ಟ ಹೆಸರು ತಂದಿದ್ದಾಳೆ ಎಂದು ಅವಳನ್ನು ಮನೆಯಲ್ಲಿ ಇರಿಸಿಕೊಳ್ಳಲು ನಿರಾಕರಿಸಿದ್ದರಿಂದ ಪ್ರಿಯಕರನ ಮನೆಗೆ ಹಿಂತಿರುಗಿದಳು.
ಸ್ಟೇಷನ್ ಹೌಸ್ ಆಫೀಸರ್ (ಕೈರಾನಾ) ವೀರೇಂದ್ರ ಕುಮಾರ್ ಮಾತನಾಡಿ, “ಇದು ನಮಗೂ ವಿಚಿತ್ರ ಪರಿಸ್ಥಿತಿಯಾಗಿದೆ. ಯುವತಿ ಅಪ್ರಾಪ್ತನೊಂದಿಗೆ ಇರಬೇಕೆಂದು ಒತ್ತಾಯಿಸುತ್ತಾಳೆ. ಆಕೆಯನ್ನು ಮಹಿಳಾ ಕಲ್ಯಾಣ ವಿಭಾಗಕ್ಕೆ ಒಪ್ಪಿಸಲಾಗಿತ್ತು, ಆದರೆ ಅಲ್ಲಿಂದ ಹುಡುಗನ ಮನೆಗೆ ಹಿಂತಿರುಗಿದಳು. ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದು ಯುವತಿಯನ್ನು ಕರೆದುಕೊಂಡು ಹೋಗದಿದ್ದರೆ, ಮಹಿಳಾ ಆಶ್ರಯ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದರು.