ಮಂಗಳವಾರ ಯುಗಾದಿ ಹಬ್ಬ ಆಚರಿಸಿ, ಬೇವು ಬೆಲ್ಲ, ಒಬ್ಬಟ್ಟು ತಿಂದು ಖುಷಿಪಟ್ಟಿದ್ದ ಬಹುತೇಕ ಜನ ಇವತ್ತು ಹೊಸತೊಡಕು ಆಚರಿಸಲಿದ್ದಾರೆ.
ಬುಧವಾರದ ಹೊಸತೊಡಕು ಬಾಡೂಟಕ್ಕೆ ಮಾಂಸ ಖರೀದಿ ಜೋರಾಗಿದೆ. ಮಟನ್ – ಚಿಕನ್ ಬೆಲೆ ಗಗನಕ್ಕೇರಿದ್ದರೂ ಹೊಸ ತೊಡಕು ಆಚರಣೆ ಸಂಭ್ರಮವೇನು ಕಡಿಮೆಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಗುಡ್ಡೆ ಮಾಂಸ, ಪಾಲು ಮಾರಾಟ ನಡೆದಿದೆ. ಮತ್ತೆ ಕೆಲವೆಡೆ ಮಾಂಸದಂಗಡಿಗಳ ಮುಂದೆ ಹೆಚ್ಚಿನ ಜನ ನೆರೆದಿದ್ದಾರೆ.
ರಾಜ್ಯದ ಅನೇಕ ಕಡೆಗಳಲ್ಲಿ ಹೊಸತೊಡಕನ್ನು ಆಚರಿಸುತ್ತಿದ್ದು, ಹಬ್ಬಕ್ಕೆ ನಾನ್ ವೆಜ್ ಅಡುಗೆ ಮಾಡಲು ಜನರು ಮಾಂಸದಂಗಡಿಗಳ ಮುಂದೆ ಚಿಕನ್ – ಮಟನ್ ಖರೀದಿಗೆ ಉದ್ದುದ್ದ ಕ್ಯೂ ನಿಂತಿರುವುದು ಸಾಮಾನ್ಯವಾಗಿತ್ತು.
ಕೆಲವೆಡೆ ಮಾಂಸ ದುಬಾರಿಯಾಗಿದ್ದರೆ, ಮತ್ತೆ ಕೆಲವೆಡೆ 50 -100 ರೂ. ಕಡಿಮೆ ದರಕ್ಕೆ ಮಾಂಸ ಮಾರಾಟ ಮಾಡಲಾಗುತ್ತಿದೆ. ಜನರು ತಮಗೆ ಇಷ್ಟವಾದ ಮಾಂಸ ಖರೀದಿಯಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ಬುಧವಾರದ ಹೊಸತೊಡಕು ಬಾಡೂಟಕ್ಕೆ ಮನೆಗಳಲ್ಲಿ ಸಿದ್ಧತೆ ನಡೆದಿದೆ. ಕೆಲವೆಡೆ ಚಂದ್ರ ದರ್ಶನ ಆಗದ ಹಿನ್ನಲೆಯಲ್ಲಿ ಹೊಸ ತೊಡಕು ಆಚರಣೆ ನಡೆಯುತ್ತಿಲ್ಲ.