ಪಾಟ್ನಾ: ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಶಾಲಾ ಬಾಲಕಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ರಕ್ಷಣಾ ಸಿಬ್ಬಂದಿಯನ್ನು ಬುಧವಾರ ಛಾಪ್ರಾದಲ್ಲಿ ಬಂಧಿಸಲಾಗಿದೆ.
ಛಾಪ್ರಾ ಜನರಲ್ ರೈಲ್ವೇ ಪೊಲೀಸರು, ದಿಬ್ರುಗಢ್‌ನಲ್ಲಿ ನಿಯೋಜಿಸಲಾದ ಜಮ್ಮು ಮೂಲದ ಅಮರಜೀತ್ ಸಿಂಗ್ ಮತ್ತು ಅರುಣಾಚಲ ಪ್ರದೇಶದ ಐಟಿಬಿಪಿಯಲ್ಲಿ ನಿಯೋಜಿಸಲಾದ ಪಂಜಾಬ್ ಮೂಲದ ಮುಖೇಶ್ ಕುಮಾರ್ ಸಿಂಗ್ ಎಂದು ಗುರುತಿಸಲಾದ ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಕ್ಕಿಂನಿಂದ ನವದೆಹಲಿಗೆ ಶಾಲಾ ಪ್ರವಾಸಕ್ಕೆ ಬಂದಿದ್ದ ನವೋದಯ ವಿದ್ಯಾಲಯದ ಬಾಲಕಿಯರು ಹೊಸ ಜಲ್ಪೈಗುರಿ ರೈಲು ನಿಲ್ದಾಣದಲ್ಲಿ ರೈಲು ಹತ್ತಿದ್ದು, ಸಂತ್ರಸ್ತೆಯರೊಂದಿಗೆ ದಿಬ್ರುಗಢ-ದೆಹಲಿ ಮಾರ್ಗದಲ್ಲಿ ಅನುಚಿತವಾಗಿ ವರ್ತಿಸಲಾಗಿದೆ.
ಶಾಲೆಯ ಪ್ರಾಂಶುಪಾಲ ವಿನಯ್ ಕುಮಾರ್ ತಮ್ಮ ದೂರಿನಲ್ಲಿ ಆರೋಪಿಗಳು ಕುಡಿದ ಮತ್ತಿನಲ್ಲಿ ಬಾಲಕಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಾವು ದಿಬ್ರುಗಢ-ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ B-11 ನಲ್ಲಿದ್ದೆವು. ಇಬ್ಬರು ಸಿಬ್ಬಂದಿ ಕೂಡ ಒಂದೇ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದರು. ಅವರು ನಮ್ಮ ಶಾಲಾ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ಅಶ್ಲೀಲ ಕಾಮೆಂಟ್ ಮಾಡಿದ್ದು, ನಾನು ತಕ್ಷಣ ಘಟನೆಯ ಬಗ್ಗೆ ರೈಲ್ವೇ ಸಿಬ್ಬಂದಿಗೆ ತಿಳಿಸಿದ್ದೇನೆ ಎಂದು ವಿನಯಕುಮಾರ್ ಹೇಳಿದ್ದಾರೆ.
ಆರ್‌ಪಿಎಫ್ ಮತ್ತು ಜಿಆರ್‌ಪಿ ಸಿಬ್ಬಂದಿ ಚಾಪ್ರಾ ಜಂಕ್ಷನ್ ನಲ್ಲಿ ಕಾಯುತ್ತಿದ್ದರು. ರೈಲು ಅಲ್ಲಿಗೆ ತಲುಪಿದಾಗ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು.