ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆತ್ತ ತಂದೆ-ತಾಯಿಗಳೇ ತಮ್ಮ ಮಕ್ಕಳನ್ನು ಹಿಂಸುತ್ತಿರುವ ಅಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂತದ್ದೇ ಘಟನೆ ನಡೆದಿದ್ದು, ಇಬ್ಬರು ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿ ತಂದೆ-ತಾಯಿ ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ.
ಬೆಂಗಳೂರಿನ ದಾಸರಹಳ್ಳಿಯ ಮನೆಯೊಂದರಲ್ಲಿ 9 ವರ್ಷದ ಹಾಗೂ 6 ವರ್ಷ ಇಬ್ಬರು ಮಕ್ಕಳಿಗೆ ತಂದೆ-ತಾಯಿಯೇ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಮಕ್ಕಳು ಅಳುತ್ತಾ, ಚೀರಾಡುತ್ತಿರುವುದನ್ನು ಕೇಳಿದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ನೋಡಿದ್ದಾರೆ. ಆದರೆ ಮನೆ ಹೊರಗಡೆಯಿಂದ ಲಾಕ್ ಆಗಿತ್ತು. ಮನೆಯಲ್ಲಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡು ಅಳುತ್ತಿದ್ದರು. ಇದನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರೆದು ನೋಡಿದಾಗ, ಇಬ್ಬರು ಮಕ್ಕಳ ಮೈತುಂಬ ಗಾಯಗಳಾಗಿವೆ. ಕೈ-ಕಾಲುಗಳಲ್ಲಿ ಸುಟ್ಟ ಗಾಯಗಳಾಗಿವೆ. ತಂದೆಯೇ ಮಕ್ಕಳಿಗೆ ವಾಟರ್ ಹೀಟರ್ ನಿಂದ ಸುಟ್ಟು ವಿಕೃತಿ ಮೆರೆದಿದ್ದಾನೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡು ನರಳಾಡಿತ್ತಿರುವ ಇಬ್ಬರು ಮಕ್ಕಳನ್ನೇ ಮನೆಯಲ್ಲಿ ಬಿಟ್ಟು ಲಾಕ್ ಮಾಡಿ ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ತೆರಳಿದ್ದಾರೆ. ಮಕ್ಕಳ ಸ್ಥಿತಿ ನೋಡಿದರೆ ಕರುಳು ಚುರ್ ಎನ್ನುವಂತಿದೆ.
ಸದ್ಯ ಪೊಲೀಸರು ಆಗೂ ಸ್ಥಳೀಯರು ಮಕ್ಕಳನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಮಕ್ಕಳಿಬ್ಬರೂ ಸಂತೋಷ್ ಹಾಗೂ ಮಂಜು ಎಬ ದಂಪತಿಯ ಮಕ್ಕಳು ಎನ್ನಲಾಗಿದ್ದು, ದಂಪತಿ ವರ್ಷದ ಹಿಂದಷ್ಟೇ ದಾಸರಹಳ್ಳಿಗೆ ಬಂದು ವಾಸವಾಗಿದ್ದಾರೆ. ಸಂತೋಷ್ ಮೆಕಾನಿಕ್ ಕೆಲಸ ಮಾಡುತ್ತಿದ್ದು, ತಾಯಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ ಎಂದು ತಿಳಿದುಬಂದಿದೆ. ಮಕ್ಕಳ ತಾಯಿಗೆ ಕರೆ ಮಾಡಲಾಗಿದ್ದು, ತಂದೆ ಫೋನ್ ಸ್ವಿಚ್ಡ್ ಆಫ್ ಆಗಿದೆ ಎನ್ನಲಾಗಿದೆ. ಮಕ್ಕಳ ಹಾಗೂ ಪೋಷಕರ ವಿಚಾರಣೆ ಬಳಿಕವೇ ಘಟನೆಯ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕಿದೆ.