ಬೆಂಗಳೂರು : ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಲೈವ್ ವಿಡಿಯೋದಲ್ಲಿ ಮಾತನಾಡುವ ವೇಳೆ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಆಡಿರುವ ಮಾತೊಂದು ಅವರಿಗೆ ಸಂಕಷ್ಟ ತಂದೊಡ್ಡಿದೆ.
ಹೌದು. ಪರಿಶಿಷ್ಟರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ವಿರುದ್ಧ ಅಟ್ರಾಸಿಟಿ ಕೇಸು ದಾಖಲಾಗಿದೆ. ಇದೀಗ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸಿಕೆ ಅಚ್ಚುಕಟ್ಟು ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ವಾಟ್ಸಾಪ್ ಮೂಲಕ ನೋಟಿಸ್ ನೀಡಿದ್ದಾರೆ. ಈ ಮೂಲಕ ರಿಯಲ್ ಸ್ಟಾರ್ ಉಪ್ಪಿಗೆ ಸಂಕಷ್ಟ ಎದುರಾಗಿದೆ.
ಅಟ್ರಾಸಿಟಿ ಕಾಯ್ದೆಯಡಿ ಕೇಸ್
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂಧನ್ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.ಉಪೇಂದ್ರ ನೀಡಿದ ಹೇಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಪ್ರತಿಭಟನೆ ಕೂಡ ನಡೆಸಲಾಗಿದೆ. ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ದೂರು ಕೂಡ ದಾಖಲಿಸಿವೆ. ಉಪೇಂದ್ರ ಅವರನ್ನು ಬಂಧಿಸಬೇಕೆಂಬ ಒತ್ತಾಯ ಕೂಡ ಕೇಳಿ ಬಂದಿದೆ.
ಉಪೇಂದ್ರ ತಾವು ನೀಡಿದ ಹೇಳಿಕೆಗಾಗಿ ಕ್ಷಮೆ ಕೇಳಿ ವಿಡಿಯೋ ಡಿಲಿಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಉಪೇಂದ್ರ ಪರ ಮತ್ತು ವಿರೋಧವಾಗಿ ಅಭಿಪ್ರಾಯಗಳು ಕೇಳಿ ಬಂದಿವೆ. ಸೆಲೆಬ್ರಿಟಿಯಾಗಿರುವ ನಟ ಉಪೇಂದ್ರ ರಾಜಕೀಯ ಪಕ್ಷದ ಮುಖ್ಯಸ್ಥರೂ ಆಗಿದ್ದಾರೆ. ಅವರು ನೀಡಿದ ಹೇಳಿಕೆ ಆಕ್ಷೇಪಾರ್ಹವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆಲವರು ಒತ್ತಾಯಿಸಿದ್ದು, ಅವರು ಈಗಾಗಲೇ ವಿಡಿಯೋ ಡಿಲಿಟ್ ಮಾಡಿ ಕ್ಷಮೆ ಕೇಳಿರುವುದರಿಂದ ಇದನ್ನು ಇಲ್ಲಿಗೆ ನಿಲ್ಲಿಸುವುದು ಒಳಿತು ಎಂದು ಮತ್ತೆ ಕೆಲವರು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು, ಫೇಸ್ಬುಕ್ ನಲ್ಲಿ ಉಪೇಂದ್ರ ಅವರು ಹೇಳಿಕೆ ನೀಡಿದ್ದು, ಕೆಲ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪ ಮಾಡಲಾಗಿದೆ. ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಕಾನೂನಿನಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.ಇವೆಲ್ಲಾ ಬೆಳವಣಿಗೆಗಳ ನಡುವೆ ಅಟ್ರಾಸಿಟಿ ಕೇಸ್ ದಾಖಲಾಗಿರುವುದರಿಂದ ಉಪೇಂದ್ರ ಅವರನ್ನು ಬಂಧಿಸುತ್ತಾರಾ ಎಂದೆಲ್ಲಾ ಚರ್ಚೆಗಳು ನಡೆದಿವೆ.
ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಲೈವ್ ವಿಡಿಯೋದಲ್ಲಿ ಮಾತನಾಡುವ ವೇಳೆ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಆಡಿರುವ ಮಾತೊಂದು ಅವರಿಗೆ ಸಂಕಷ್ಟ ತಂದೊಡ್ಡಿದೆ. ಅವರ ಈ ಮಾತಿನ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಸೂದನ್ ಎಂಬವರು ಅಟ್ರಾಸಿಟಿ ಕೇಸ್ ದಾಖಲಿಸಿದ್ದು, ಇದರ ಜೊತೆಗೆ ಇತರೆಯವರು ಸಹ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು.. ಇದೀಗ ಉಪೇಂದ್ರ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್, ಉಪೇಂದ್ರ ಅವರ ಈ ಹೇಳಿಕೆ ಕುರಿತಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಒಂದು ಠಾಣೆಯಲ್ಲಿ ಉಪೇಂದ್ರ ಅವರ ವಿರುದ್ಧ ಎಫ್ಐರ್ ದಾಖಲಾಗಿದೆ ಎಂದು ಪೊಲೀಸರು ಮನವರಿಕೆ ಮಾಡಲು ಮುಂದಾದಾಗ ಪಟ್ಟು ಹಿಡಿದು ಭೈರಪ್ಪ ಹರೀಶ್ ಕುಮಾರ್ ಎಫ್ಐಆರ್ ಮಾಡಿಸಿದ್ದಾರೆ.